ಪ್ರಾಮಾಣಿಕತೆಯ ಸೇವೆಯಿಂದ ಸಾರ್ಥಕತೆ ಸಾಧ್ಯ

ಕಲಬುರಗಿ:ಜು.24: ಸರ್ಕಾರಿ ನೌಕರಿ ಪಡೆಯುವುದು, ದೀರ್ಘ ಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಅಂತಹ ಸೇವೆ ನಿಜಕ್ಕೂ ಸಾರ್ಥಕತೆ ಪಡೆಯಲು ಸಾಧ್ಯವಿದೆ ಎಂದು ನಿವೃತ್ತ ನ್ಯಾಯಾಧೀಶ ಜಿ.ಕೆ.ಗೋಖಲೆ ಅಭಿಪ್ರಾಯಪಟ್ಟರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ‘ಗೊಬ್ಬೂರಕರ್ ಅಭಿಮಾನಿ ಗೆಳೆಯರ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಲಾಗಿದ್ದ ‘ಶಿವಪುತ್ರ ಗೊಬ್ಬೂರಕರ್ ವಯೋನಿವೃತ್ತ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉನ್ನತ ಸಾಧನೆಗೆ ನಿರಂತರ ಪ್ರಯತ್ನ ಅಗತ್ಯ. ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರನ್ನು ಗುರ್ತಿಸಿ, ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಬೇಕು. ಹುಟ್ಟು-ಸಾವಿನ ಮಧ್ಯದ ಅವಧಿಯನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಾಗಬೇಕು. ಹೆಸರು, ಹುದ್ದೆ, ಪ್ರತಿಷ್ಠೆಗಾಗಿ ಕೆಲಸ ಬೇಡ. ಗೊಬ್ಬೂರಕರ್ ಅವರ ಸೇವೆ ಮಾದರಿಯಾಗಿದೆ. ಸರ್ವರ ಕಲ್ಯಾಣಕ್ಕಾಗಿ ಇಡೀ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಬುದ್ಧ-ಬಸವ-ಅಂಬೇಡ್ಕರ್ ಆದರ್ಶಗಳನ್ನು ಅಳವಡಿಸಿಕೊಂಡು ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡಬೇಕು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಸಾನಿಧ್ಯ ವಹಿಸಿದ್ದ ಬುದ್ಧ ವಿಹಾರದ ಪೂಜ್ಯ ಸಂಘಾನಂದ ಭಂತೇಜಿ ಮಾತನಾಡಿ, ಪ್ರತಿಯೊಬ್ಬರು ಜ್ಞಾನ ಪಡೆಯಬೇಕು. ಜಾತಿಗಿಂತ ನೀತಿ, ಮಾನವೀಯತೆಗೆ ಪ್ರಾಧಾನ್ಯತೆ ನೀಡಬೇಕು. ಪರಸ್ಪರ ಪ್ರೀತಿ-ಪ್ರೇಮದಿಂದ ಸಹಬಾಳ್ವೆ ಮಾಡಬೇಕು. ಅಂಧಶೃದ್ಧೆಯಿಂದ ಹೊರಬನ್ನಿ. ಬುದ್ಧನ ಪಂಚಶೀಲ ತತ್ವಗಳು ಜೀವನಕ್ಕೆ ಬೆಳಕಾಗಿವೆ. ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ನಿಮ್ಮ ನಿವೃತ್ತಿಯ ಸಮಯವನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಶಿವರಾಯ ದೊಡ್ಡಮನಿ, ಎಂ.ಬಿ.ನಿಂಗಪ್ಪ, ಸಂಜೀವಕುಮಾರ ಶೆಟ್ಟಿ, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಸೂರ್ಯಕಾಂತ ಸಾವಳಗಿ, ಅಶೋಕ ಕಾಳೆ, ಬಸವರಾಜ ಎಸ್.ಪುರಾಣೆ, ಉಮಾದೇವಿ ಎಸ್.ಗೊಬ್ಬೂರಕರ್, ರಮೇಶ ಯಾಳಗಿ, ಎ.ಬಿ.ಹೊಸಮನಿ, ಶಿವಕುಮಾರ, ಅರ್ಜುನ ಗೊಬ್ಬೂರಕರ್, ಪದ್ಮಾವತಿ, ನಾಗೇಂದ್ರಪ್ಪ ಮದನಕರ್, ಶ್ವೇತಾ, ನಾಗವೇಣಿ, ಶಶಿಕಾಂತ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.