ಪ್ರಾಮಾಣಿಕತೆಯ ಜೀವನವೇ ಬಲುದೊಡ್ಡ ದೇಶ ಸೇವೆ

ಕಲಬುರಗಿ.ಜು.27: ಎಲ್ಲರೂ ಸೈನಿಕರಾಗಿ ದೇಶ ಸೇವೆ ಮಾಡಲು ಅವಕಾಶ ಸಿಗದು ಆದರೆ ಎಲ್ಲ ಭಾರತೀಯರು ಪ್ರಾಮಾಣಿಕತೆಯಿಂದ ಜೀವನ ಮಾಡಿ ರಾಷ್ಟ್ರದ ಪ್ರಗತಿಗೆ ದುಡಿದಾಗ ದೇಶ ಸೇವೆಯಾಗುತ್ತದೆ ಎಂದು ಕಾರ್ಗಿಲ್ ಯೋಧರಾದ ಶಿವಶರಣ ಸಿದ್ಧಪ್ಪ ತಾವರಖೇಡ ಮತ್ತು ಶಿವಪುತ್ರಪ್ಪ ಸಾಯಬಣ್ಣ ಹಿರಿಯನಾಯಕ ಹೇಳಿದರು.
ಕಲಬುರಗಿ ಆಕಾಶವಾಣಿಯಲ್ಲಿ ಜು. 27 ರಂದು ‘ಜೊತೆ ಜೊತೆಯಲಿ’ ನೇರ ಫೋನ್ ಇನ್ ಸಂವಾದದಲ್ಲಿ “ಕಾರ್ಗಿಲ್ ವಿಜಯ್ ದಿವಸ್ – ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಸೈನಿಕರ ಜೊತೆ ಸಂವಾದ” ಕಾರ್ಯಕ್ರಮದಲ್ಲಿ ಅವರು ಜಂಟಿಯಾಗಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.
ಗಡಿಕಾಯುವ ಸೈನಿಕರಿಂದಾಗಿ ದೇಶ ಸುಭದ್ರವಾಗಿದ್ದು ಸೈನಿಕರು ಕಠಿಣ ವಾತಾವರಣದಲ್ಲೂ ತಾಯಿ ಭಾರತಾಂಬೆಯ ರಕ್ಷಣೆಗಾಗಿ ದಿನದ 24 ಗಂಟೆ ಕಣ್ಗಾವಲು ಇಟ್ಟು ಕಾಯುತ್ತಿರುತ್ತಾರೆ. ಹಾಗೆ ಭಾರತೀಯ ಪ್ರಜೆಗಳು ದೇಶದ ಪ್ರಗತಿಗಾಗಿ ದುಡಿದು ಭ್ರಷ್ಟಾಚಾರ ಮುಕ್ತ, ಶಾಂತಿ ಸೌಹಾರ್ದದ ಬಾಳ್ವೆ ನಡೆಸಿ ವಿಶ್ವದಲ್ಲೇ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸುವ ಗುರುತರ ಹೊಣೆ ಹೊರಬೇಕೆಂದರು.
ಮಡಿಕೇರಿಯ, ಜನರಲ್ ತಿಮ್ಮಯ್ಯ ಮೂಸಿಯಂನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸುಬೇದಾರ್ ಮೇಜರ್ ತಮ್ಮಯ್ಯ ತಮ್ಮ 28 ವರ್ಷಗಳ ಸೈನ್ಯದ ಸೇವೆ ಸ್ಮರಿಸಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ರೋಚಕ ಅನುಭವ ಹಂಚಿಕೊಂಡರು ಆ. 13 ರಿಂದ 15 ರ ವರೆಗೆ ದೇಶದಲ್ಲಿ ಆಚರಿಸುವ ‘ಹರ್ ಘರ್ ಝಂಡಾ’ (ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ) ಕಾರ್ಯಕ್ರಮ ಮೂಲಕ ದೇಶಕ್ಕಾಗಿ ಮಡಿದ ಸೈನಿಕರಿಗೆ ಗೌರವ ತೋರಬೇಕೆಂದು ಕರೆ ನೀಡಿದರು. ಮಂಗಳೂರಿನ ಗೋಪಿನಾಥ ರಾವ್ ಮಾತನಾಡಿ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ತಾಂತ್ರಿಕ ವಲಯದಲ್ಲಿ ಕಾರ್ಗಿಲ್ ನೆಲೆಯಲ್ಲಿ ಸೇವೆ ಮಾಡಿದ್ದನ್ನು ನೆನಪಿಸಿ ರಾಷ್ಟ್ರ ಸೇವೆಗೆ ಎಲ್ಲರೂ ಬದ್ಧರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧರ ಜೊತೆ ವಾಸುದೇವ ಪಾಟೀಲ್ ವೈಜಾಪುರ, ರಾಘವೇಂದ್ರ ಭಕ್ರಿ ಸುರಪುರ, ದೇವಕಿ ಟೇಂಗಳಿ ಮತ್ತು ಸಂಗನಗೌಡ ಸಿದ್ದಗೊಂಡ ಸಂವಾದ ನಡೆಸಿದರು.
ಕಾರ್ಯಕ್ರಮವನ್ನು ಡಾ. ಸದಾನಂದ ಪೆರ್ಲ ನಡೆಸಿಕೊಟ್ಟರು. ಸಂಗಮೇಶ್ ಮತ್ತು ಮಧು ದೇಶಮುಖ್ ನೆರವಾದರು ಪ್ರಭು ನಿಷ್ಠಿ ಮತ್ತು ಅಮರೇಂದ್ರ ವಿ. ತಾಂತ್ರಿಕ ನೆರವು ನೀಡಿದರು ಎಂದು ಕಾರ್ಯಕ್ರಮ ಸಂಯೋಜಕರಾದ ಅನಿಲ್ ಕುಮಾರ್ ಎಚ್. ಎನ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.