ಪ್ರಾಪರ್ ಶಾಲೆಯಲ್ಲಿ ಕರೋನಾ ಜಾಗೃತಿ ಜಾತಾ

ಗಂಗಾವತಿ. ಮಾ 30 : ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ (ಪ್ರಾಪರ್) ಶಾಲೆಯಲ್ಲಿ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೊರೋನಾ ಎರಡನೇ ಅಲೆಯ ಜಾಗೃತಿ ಜಾತಾ ನಡೆಸಿದರು.
ಗುರುವಾರ ಶಾಲಾ ಆವರಣದಿಂದ ನಗರದ ಕೆಲವು ರಸ್ತೆಗಳ ಮೂಲಕ ಜಾತಾ ನಡೆಸಲಾಯಿತು. ಕೊರೋನಾ ಮಹಾ ಮಾರಿ ರೋಗವನ್ನು ನಿಯಂತ್ರಿಸಲು ಜನರು ಸಜ್ಜಾಗಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಸ್ವಚ್ಚತೆ ಕಾಪಾಡುವುದು, ಎಲ್ಲೆಂದರಲ್ಲಿ ಉಗುಳುವುದು ಮಾಡದೇ ಪರಿಸರ ಸ್ವಚ್ಚತೆ ಕಾಪಾಡುವಂತೆ ವಿದ್ಯಾರ್ಥಿಗಳು ಜನರಲ್ಲಿ ಮನವಿ ಮಾಡಿದರು. ನೂತನ ಎಸ್‍ಡಿಎಂಸಿ ಅಧ್ಯಕ್ಷ ಈರೇಶ ಭೀಮಪ್ಪ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ವಿದ್ಯಾರ್ಥಿಗಳೊಂದಿಗೆ ಜಾತಾದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ಮಾರ್ಚ್ ತಿಂಗಳಲ್ಲಿ ಕರೊನಾ ಬಂದು ಜನರ ಬದುಕನ್ನೆ ನುಂಗಿತ್ತು. ಶಾಲಾ ಕಾಲೇಜುಗಳು ಇಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ವ್ಯತ್ಯಾಸವಾಗಿತ್ತು. ಕಳೆದ ನಾಲ್ಕೈದು ತಿಂಗಳಿಂದ ಕೊರೋನಾ ಕಡಿಮೆಯಾಗಿದೆ ಎಂಬ ಸಂತಸದಲ್ಲಿದ್ದ ಜನತೆಗೆ ಮತ್ತೆ ಒಕ್ಕರಿಸಿ ಆತಂಕ ಮೂಡಿಸಿದೆ. ಗಂಗಾವತಿ ನಗರದಲ್ಲಿ ಎರಡನೇ ಅಲೆ ಪತ್ತೆಯಾಗಿ ಇತ್ತೀಚಿಗೆ ಕೊರೋನಾ ಪಾಜಿಟಿವ್ ಪ್ರಕರಣಗಳು ಬಂದಿವೆ. ಹೀಗಾಗಿ ಜನರು ಮತ್ತು ವಿದ್ಯಾರ್ಥಿಗಳು, ಶಿಕ್ಷಕರು ಎಚ್ಚರಿಕೆಯಿಂದ ಕೆಲಸ ಕಾರ್ಯಗಳಲ್ಲಿ ಭಾಗವಹಿಸಬೇಕು. ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಡಿಎಂಸಿ ಉಪಾಧ್ಯಕ್ಷೆ ಪ್ರೇಮಾ ನೀಲಕಂಠ, ಸದಸ್ಯರಾದ ಯಮನಮ್ಮ, ಶಂಕ್ರಮ್ಮ, ಹುಸೇನಬೀ, ಮುಖ್ಯೋಪಾಧ್ಯಾಯನಿ ಕೆ.ಎಲ್.ಜಯಲಕ್ಷ್ಮೀ, ಶಿಕ್ಷಕಿಯರಾದ ಭಾಗ್ಯಲಕ್ಷ್ಮಿ, ಈರಮ್ಮ ಮತ್ತಿತರು ಮತ್ತು ವಿದ್ಯಾರ್ಥಿಗಳು ಇದ್ದರು.