ಪ್ರಾಧ್ಯಾಪಕರ ಹುದ್ದೆಗಳಲ್ಲಿನ ಅನ್ಯಾಯ ಸರಿಪಡಿಸಲು ಒತ್ತಾಯ

ಕಲಬುರಗಿ,ಅ.13: ಪ್ರಾಧ್ಯಾಪಕರ ಹುದ್ದೆಗಳಲ್ಲಿ ಆದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷ ಡಾ. ಶರಣಪ್ಪ ಸೈದಾಪೂರ್ ಅವರು ಒತ್ತಾಯಿಸಿದರು.
ಬುಧವಾರ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಸಿ.ಎಸ್. ಸಾಲಿಮಠ್ ಅವರ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರಿಗೆ ನಿಯೋಗದ ನೇತೃತ್ವ ವಹಿಸಿ ಮನವಿ ಪತ್ರ ಸಲ್ಲಿಸಿದ ಅವರು, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಮತ್ತು ಪದವಿ ಕಾಲೇಜು ಅಧ್ಯಾಪಕರ ಬಹುದಿನಗಳ ಬೇಡಿಕೆಯಾದ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ ಕೊಡುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಆದಾಗ್ಯೂ, ಪ್ರಸ್ತುತ 2021-2022ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಲು ನಿಗದಿಗೊಳಿಸಿರುವ ನಿಯಮಗಳನ್ನು ಉಲ್ಲಂಘಿಸಿ ಪಟ್ಟಿಯನ್ನು ಸಿದ್ದಪಡಿಸಿ ಅವಸರದಲ್ಲಿ ಪ್ರಕಟಿಸಿರುವುದು ಖಂಡನಾರ್ಹ ಎಂದು ಆಕ್ಷೇಪಿಸಿದರು.
ಸದರಿ ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಬಡ್ತಿ ನೀಡಲು ಅನುಸರಿಸಿದ ಮಾನದಂಡ ಅವೈಜ್ಞಾನಿಕವಾಗಿದ್ದು ತಕ್ಷಣವೇ ಪರಿಷ್ಕøರಿಸಬೇಕೆಂದು ಅಧ್ಯಾಪಕರ ಸಂಘವು ಆಗ್ರಹಿಸುತ್ತದೆ. ಜೊತೆಗೆ ಸಂವಿಧಾನದ 371ನೇ(ಜೆ) ಕಾಯ್ದೆಯ ಅಡಿಯಲ್ಲಿ ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡುವಾಗ ವಿಶೇಷ ಮೀಸಲಾತಿಯನ್ನು ನೀಡಬೇಕೆಂಬ ನಿಯಮಾವಳಿಗಳನ್ನು ಉಲ್ಲಂಘಿಸಿರುವದು ಉನ್ನತ ಶಿಕ್ಷಣ ವಿರೋಧಿ ಕ್ರಮವಾಗಿದೆ ಎಂದು ಅವರು ಟೀಕಿಸಿದರು.
ಪ್ರಾಧ್ಯಾಪಕರ ಬಡ್ತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರನ್ನು ಕಡೆಗಣಿಸಿರುವುದು ಸರ್ಕಾರದ ಪ್ರಜಾತಾಂತ್ರಿಕ ವಿರೋಧಿ ಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಸಹ ಪ್ರಾಧ್ಯಾಪಕರು ಪ್ರಾಧ್ಯಾಪಕರ ಹುದ್ದೆಗಳಿಗೆ ಆನ್‍ಲೈನ್‍ನಲ್ಲಿ ಭರ್ತಿಮಾಡಿದ ಗೂಗಲ್ ಫಾರಂಗಳನ್ನು ಪರಿಪೂರ್ಣವಾಗಿ ಪರಿಶೀಲಿಸದೇ ಮತ್ತು ಸೇವಾ ಹಿರಿತನವನ್ನು ಸಹ ಪರಿಗಣಿಸದೇ ಇರುವುದು ಅವೈಜ್ಞಾನಿಕವಾಗಿದೆ. ಕಲ್ಯಾಣ ಕರ್ನಾಟಕದ ಹಲವು ಸಹ ಪ್ರಾಧ್ಯಾಪಕರುಗಳು ಪ್ರಾಧ್ಯಾಪಕ ಹುದ್ದೆಗಳಿಗೆ ಸಲ್ಲಿಸಿದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸದೇ ಅವಸರದಲ್ಲಿ ಪ್ರಾಧ್ಯಾಪಕರ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ತಕ್ಷಣವೇ ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಾಧ್ಯಾಪಕರ ಹುದ್ದೆಗಳ ಸಂದರ್ಶನಕ್ಕೆ 1 ಅನುಪಾತ 2ನ್ನು ನಿಗದಿಮಾಡಿರುವ ನೀತಿಯನ್ನು ಕೈಬಿಡಬೇಕು. ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹರಾದ ಎಲ್ಲಾ ಸಹ ಪ್ರಾಧ್ಯಾಪಕರುಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿನೀಡುವ ಕ್ರಮಗಳನ್ನು ಕೈಗೊಳ್ಳುವಂತೆ, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಸಹ ಪ್ರಾಧ್ಯಾಪಕರು ಪ್ರಾಧ್ಯಾಪಕರ ಹುದ್ದೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಹಾಗೂ ಭರ್ತಿ ಮಾಡಿದ ಗೂಗಲ್ ಫಾರಂಗಳನ್ನು ಸರಿಯಾಗಿ ಪುನರ್‍ಪರಿಶೀಲಿಸಿ ಅವರನ್ನು ಮತ್ತೇ ಸಂದರ್ಶನಕ್ಕೆ ಪರಿಗಣಿಸುವಂತೆ ಅವರು ಆಗ್ರಹಿಸಿದರು.
ನಿಯೋಗದಲ್ಲಿ ಡಾ. ಅನೀಲಕುಮಾರ್ ಹಾಲು, ಡಾ. ಮಲ್ಲಿಕಾರ್ಜುನ್ ಶೆಟ್ಟಿ, ಡಾ. ಚಿನ್ನಾ ಆಶಪ್ಪ, ಡಾ. ಶರಣಪ್ಪ ಗುಂಡಗುರ್ತಿ, ಪ್ರೊ. ಚಿತ್ಕಲಾ ಮಠಪತಿ, ಪ್ರೊ. ಸಂತೋಷ್ ಹಂಪ್ಳಿ, ಡಾ. ಕಲ್ಯಾಣರಾವ್ ಪಾಟೀಲ್, ಡಾ. ದೇವಿದಾಸ್ ರಾಠೋಡ್, ಡಾ. ಶಂಕರ್ ರಾಠೋಡ್, ಚನ್ನಬಸಯ್ಯ ಹಿರೇಮಠ್, ಡಾ. ಶರಣಬಸಪ್ಪ ಚಿಕ್ಕಳ್ಳಿ ಮುಂತಾದವರು ಪಾಲ್ಗೊಂಡಿದ್ದರು.