ಪ್ರಾದೇಶಿಕ ಕ್ಷಿಪ್ರ ರೈಲು ಸೇವೆಗೆ ಮೋದಿ ಚಾಲನೆ

ಲಕ್ನೊ,ಅ.೨೦- ದೇಶದ ಮೊಟ್ಟ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲು ಸೇವೆ ಉತ್ತರ ಪ್ರದೇಶದ ಸಾಹಿಬಾಬಾದ್ ಮತ್ತು ದುಹೈ ಡಿಪೊ ನಿಲ್ದಾಣಗಳನ್ನು ಸಂಪರ್ಕಿಸುವ ’ನಮೋ ಭಾರತ್’ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿಲ್ಲಿ ಹಸಿರು ನಿಶಾನೆ ತೋರಿದರು.ದೇಶದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಇದಾಗಿದೆ. ಈ ಮೂಲಕ ದೇಶದಲ್ಲಿ ಸಂಪರ್ಕ ಕ್ರಾಂತ್ರಿಗೆ ಮತ್ತೊಮ್ಮೆ ಪ್ರಧಾನಿ ಮುನ್ನುಡಿ ಬರೆದಿದ್ದಾರೆ.ಹೊಸ ಮಾದರಿಯ ರೈಲು ಸೇವೆಗೆ ಚಾಲನೆ ನೀಡಿದ ಬಳಿಕ ನಮೋ ಭಾರತ್ ರೈಲಿನಲ್ಲಿ ಸಂಚಾರ ಮಾಡಿದ ಪ್ರಧಾನಿ ಕೆಲವು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‍ನ ೧೭-ಕಿಮೀ ಆದ್ಯತೆಯ ವಿಭಾಗ ಉದ್ಘಾಟನೆಯ ಒಂದು ದಿನದ ನಂತರ ನಾಳೆಯಿಂದ ಪ್ರಯಾಣಿಕರಿಗೆ ಅಂತರ್ ಸಂಚಾರಕ್ಕೆ ಮುಕ್ತವಾಗಿದೆ,’ನಮೋ ಭಾರತ್’ ಒಂದು ಪರಿವರ್ತನೆಯ” ಪ್ರಾದೇಶಿಕ ಅಭಿವೃದ್ಧಿ ಉಪಕ್ರಮವಾಗಿದೆ, ಇಂಟರ್‍ಸಿಟಿ ಪ್ರಯಾಣಕ್ಕಾಗಿ ಹೈ-ಸ್ಪೀಡ್ ರೈಲುಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ರೈಲಿನಲ್ಲಿ ಏನೆಲ್ಲಾ ಸೇವೆ ಲಭ್ಯ:
ಸಾಹಿಬಾಬಾದ್ ಮತ್ತು ದುಹೈ ಡಿಪೊ ನಡುವಿನ ಐದು ನಿಲ್ದಾಣಗಳನ್ನು ಹೊಂದಿದೆ ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೊಗಳಲ್ಲಿ ರೈಲು ನಿಲುಗಡೆ ಆಗಲಿದೆ,ರೈಲುಗಳು ಪ್ರತಿ ಸೀಟಿನಲ್ಲಿ ಓವರ್‍ಹೆಡ್ ಸ್ಟೋರೇಜ್, ವೈ-ಫೈ ಮತ್ತು ಚಾರ್ಜಿಂಗ್ ಆಯ್ಕೆಗಳಂತಹ ವೈಶಿಷ್ಟ್ಯಗಳೊಂದಿಗೆ ಪ್ರಯಾಣಿಕರ ಸೌಕರ್ಯಗಳಿಗೆ ಆದ್ಯತೆ ನೀಡುತ್ತವೆ. ಇದಲ್ಲದೆ, ವಿಶಾಲವಾದ ಆಸನಗಳು, ಸಾಕಷ್ಟು ಲೆಗ್‌ರೂಮ್ ಮತ್ತು ಕೋಟ್ ಹ್ಯಾಂಗರ್‍ಗಳೊಂದಿಗೆ ಪ್ರೀಮಿಯಂ-ಕ್ಲಾಸ್ ಕಾರು ಇರುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈ ವೇಳೆ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು.