ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆಗೊಳಪಡಿಸಿದರೆ ಕ್ಯಾನ್ಸರ ರೋಗದಿಂದ ಗುಣಮುಖ: ಡಿ.ಸಿ

ಬೀದರ:ನ.7: ನವೆಂಬರ್.6 ರಂದು 100 ಹಾಸಿಗೆಗಳ ಪ್ರಸೂತಿ ಆರೈಕೆ ಆಸ್ಪತ್ರೆ ಬೀದರನಲ್ಲಿ ಬೆಳಿಗ್ಗೆ 11 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಮಾನ್ಯ ರಾಮಚಂದ್ರನ್.ಆರ್ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಕ್ಯಾನ್ಸರ್ ಇಂದು ಎಲ್ಲಾ ವಯೋಮಾನದವರಿಗೂ ಹಾಗೂ ಇಂದಿನ ಜೀವನಶೈಲಿ ಆಹಾರ, ಜಂಕ್ ಫುಡ್ಸ್ ಹಾಗೂ ತಂ¨ಡÁಕು ಸೇವನೆ ಕಾರಣದಿಂದಾಗಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚುತ್ತಿದ್ದು, ಬೀದರ ಜಿಲ್ಲೆಯಲ್ಲಿ ಜನತೆಯ ಆರೋಗ್ಯಕ್ಕೆ ಸಹಕಾರಿಯಾಗಬಲ್ಲ ಇಂತಹ ಉಚಿತ ಆರೋಗ್ಯ ಶಿಬಿರಗಳು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಏರ್ಪಡಿಸುವಂತಾಗಲಿ ಎಂದು ಕರೆ ನೀಡಿದರು. ಸಾರ್ವಜನಿಕರು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡು ಕ್ಯಾನ್ಸರ್ ರೋಗದಿಂದ ಚಿಕಿತ್ಸೆಗೊಳಪಟ್ಟು ಆರೋಗ್ಯವಂತ ಬದುಕು ಸಾಗಿಸಬೇಕೆನ್ನುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಶಿಬಿರದ ಮುಖ್ಯ ರೂವಾರಿಯಾದ ಹೈದ್ರಬಾದನ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ|| ಬಿಪಿನ್ ಗೋಯಲ್ ಅವರು ಮಾತನಾಡುತ್ತಾ ಕ್ಯಾನ್ಸರ್ ರೋಗಕ್ಕೆ ಮುಂಜಾಗೃತೆ ಬಹಳ ಮುಖ್ಯವಾಗಿದ್ದು ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಅತ್ಯಾಧಿಕ ಕ್ಯಾನ್ಸರನಿಂದ ಸಾವು-ನೋವುಗಳಿಗೆ ಕಾರಣಗಳಾಗಿದ್ದು ಇದನ್ನು ತಡೆಗಟ್ಟಲು ಶೀಘ್ರ ಕ್ಯಾನ್ಸರ್ ರೋಗಪತ್ತೆ ಹಾಗೂ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆಗೊಳಪಡಿಸಿದರೆ ಶತಪ್ರತಿಶತ ಗುಣಮುಖರಾಗಬಹುದೆಂದು ವಿವರಿಸುತ್ತಾ ತಂಬಾಕು ಸೇವನೆಯಿಂದ ಯುವಜನತೆ ಹಾಗೂ ಯಾವುದೇ ವಯೋಮಾನದವರು ದೂರವಿರಬೇಕೆಂದು ಕರೆನೀಡಿದರು. ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಶ್ರೀಮತಿ. ಜಹಿರಾ ನಸೀಮ್ ಅವರು ಮಾತನಾಡುತ್ತಾ ಕ್ಯಾನ್ಸರ್ ರೋಗದಿಂದ ವಿಮುಕ್ತರಾಗಲು ಪ್ರತಿಯೊಬ್ಬರು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆಗೊಳಪಡಿಸಿ ಯಾವುದೇ ಭಯವಿಲ್ಲದೆ ಚಿಕಿತ್ಸೆಗೆ ಒಳಗಾಗುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ|| ವಿ.ಜಿ.ರೆಡ್ಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ರಿಮ್ಸ್‍ನ ನಿರ್ದೇಶಕರಾದ ಡಾ|| ಚಂದ್ರಕಾಂತ ಚಿಲ್ಲರ್ಗಿ, ಡಾ|| ನಾಗರಾಜ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು, ಡಾ|| ಉಮಾ ದೇಶಮುಖ ಖ್ಯಾತ ಸ್ತ್ರೀ ರೋಗ ತಜ್ಞರು, ಡಾ|| ಸಂಗಾರೆಡ್ಡಿ ತಾಲೂಕಾ ಆರೋಗ್ಯ ಅಧಿಕಾರಿಗಳು ಬೀದರ, ಡಾ|| ಮಹಮದ್ ಸೋಹೆಲ್ 100 ಹಾಸಿಗೆಗಳ ಪ್ರಸೂತಿ ಆರೈಕೆ ಆಸ್ಪತ್ರೆ ಸೇರಿ ಅನೇಕ ತಜ್ಞ ವೈದ್ಯರು ಉಪಸ್ಥಿತರಿದ್ದರು.

ಬೀದರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಂಗಪ್ಪ ಕಾಂಬಳೆ ಅವರು ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀದರ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರಾವಣ ಜಾಧವ ಅವರು ವಂದನಾರ್ಪಣೆ ನೆರವೇರಿಸಿದರು.