ಪ್ರಾಥಮಿಕ ಸಂಪರ್ಕಿತರ ಕ್ವಾರೈಂಟೈನ್ ಕಡ್ಡಾಯ

ಅಮರಮೂಡ್ನೂರಿನಲ್ಲಿ ತುರ್ತು ಕೋವಿಡ್-೧೯ ರ ಜಾಗೃತಿ ಸಭೆಯಲ್ಲಿ ಸಚಿವ ಅಂಗಾರ

ಸುಳ್ಯ, ಜೂ.೩- ಗ್ರಾಮದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣದಿಂದ ಗ್ರಾಮದ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ನಿಯಂತ್ರಣ ಮಾಡಲು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಪಾಸಿಟಿವ್ ಪ್ರಕರಣ ಕಂಡು ಬಂದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕ್ವಾರೈಂಟೈನ್ ಮಾಡಬೇಕು ಎಂದು ಸಚಿವರ ಎಸ್.ಅಂಗಾರ ಹೇಳಿದರು.

ಅಮರಮುಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್-೧೯ ರ ಮುಂಜಾಗೃತಾ ಕ್ರಮವಾಗಿ ಸಚಿವ ಎಸ್.ಅಂಗಾರರವರ ನೇತೃತ್ವದಲ್ಲಿ ಪಂಚಾಯಿತಿ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ ಕುಕ್ಕುಜಡ್ಕದಲ್ಲಿ ಬುಧವಾರ ನಡೆದ ತುರ್ತು ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಸಂಪರ್ಕಿತರ  ಮನೆಗಳಿದ್ದರೆ ಅವರಿಗೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಒದಗಿಸುವ ವ್ಯವಸ್ಥೆ ಕಾರ್ಯಪಡೆ ಮೂಲಕ ಮಾಡಬೇಕು.ಆರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಭೇಟಿಯ ಸಂದರ್ಭ ಅವಶ್ಯ ಔಷಧಿಗಳನ್ನು ತೆಗೆದುಕೊಂಡು ಹೋಗಬೇಕು.ಪಡಿತರ ವಿತರಣೆಯನ್ನು ಆಯಾಯ ಪ್ರದೇಶಗಳಲ್ಲಿ ಒ.ಟಿ.ಪಿ.ಪಡೆದು ವಿತರಿಸುವ ವ್ಯವಸ್ಥೆಯನ್ನು ಸಹಕಾರಿ ಸಂಘದವರು ನಿರ್ವಹಿಸಬೇಕು. ಪಂಚಾಯಿತಿ ವತಿಯಿಂದ ವಾಹನದ ವ್ಯವಸ್ಥೆ ಹಾಗೂ ಮಾಸ್ಕ್, ಸ್ಯಾನಿಟೈಸರ್, ಪಿ.ಪಿ.ಇ.ಕಿಟ್ ವ್ಯವಸ್ಥೆ ಮಾಡಲಾಗುವುದು. ನಿಯಮ

ಉಲ್ಲಂಘಿಸಿದವರ ವಿರುದ್ಧ ಪೋಲಿಸರ ಸಹಕಾರ ಪಡೆದು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು. ಅಂಗಡಿ ಮುಂಗಟ್ಟುಗಳು ನಿಯಮ ಪಾಲಿಸದಿದ್ದಲ್ಲಿ ಲೈಸನ್ಸ್ ರದ್ದು

ಪಡಿಸಿ ದಂಡ ವಿಧಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭ ಅಮರಪಡ್ನೂರು ಗ್ರಾಮಕ್ಕೆ ಕೇವಲ ಒಬ್ಬರು ಮಾತ್ರ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿದ್ದು ಇನ್ನೊಬ್ಬರನ್ನು ನೇಮಕ ಮಾಡಬೇಕು ಎಂಬ ಬೇಡಿಕೆ ಇರಿಸಲಾಯಿತು. ಡೆಂಗ್ಯೂ ಪ್ರಕರಣ ಇರುವ ಪ್ರದೇಶದಲ್ಲಿ ಫಾಗಿಂಗ್ ಮಾಡಬೇಕು. ಸಮುದಾಯ ಗುಂಪು ವಾಸ ಮಾಡುವ ಸ್ಥಳಗಳಿಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ತಪಾಸಣೆ ನಡೆಸಿ ಔಷಧಿ ನೀಡುವ ವ್ಯವಸ್ಥೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ನಡೆಸಬೇಕು. ಗ್ರಾಮದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಪಂಚಾಯತ್ ಪಿ.ಡಿ.ಒ ಜವಬ್ದಾರಿ ವಹಿಸಿಕೊಂಡು ಪಂ.ಸದಸ್ಯರ ಕಾರ್ಯಪಡೆ ಸದಸ್ಯರ ಸಹಕಾರದೊಂದಿಗೆ ನಿರ್ವಹಿಸಬೇಕು. ಇದೀಗ ಆದ್ಯತೆಯಲ್ಲಿ ೨ ನೇ ಡೋಸ್ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗುವುದು

ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ವೈದ್ಯಾಧಿಕಾರಿ ನಂದಕುಮಾರ್ ಸುಳ್ಯ,ಬೆಳ್ಳಾರೆ ಎಸ್.ಐ.ಆಂಜನೇಯ ರೆಡ್ಡಿ, ಸೊಸೈಟಿ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ, ತಾ.ಪಂ.ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಪಂ.ಪಿ.ಡಿ.ಒ.ಆಕಾಶ್, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ಕೆ.ಎಫ್ ಡಿ.ಸಿ .ತೋಟದ ಅಧೀಕ್ಷಕ ಭರತ್, ಹಾಲು ಸೊಸೈಟಿ ಅಧ್ಯಕ್ಷ ತಿರುಮಲೇಶ್ವರ ಭಟ್ ಕುಡುಂಬಿಲ, ಸೊಸೈಟಿ ಸಿ.ಇ ಒ.ಮೋಹನ್ ಕುಮಾರ್, ಪಂಚಾಯಿತಿ ಸದಸ್ಯರು ಸೊಸೈಟಿ ನಿರ್ದೇಶಕರು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಇಲಾಖೆಯ ಅಧಿಕಾರಿಗಳು, ಪಂ.ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.