ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸುಗಮ

ಕೋಲಾರ,ಡಿ.೧:೨೦೨೦-೨೧ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಆದ್ಯತಾ ಪಟ್ಟಿಯಲ್ಲಿನ ಕ್ರಮಸಂಖ್ಯೆ ೨೪೯ ರಿಂದ ೬೦೦ ರವರೆಗೂ ಇಂದು ಜಿಲ್ಲೆಯೊಳಗಿನ ವರ್ಗಾವಣೆ ಕೌನ್ಸಿಲಿಂಗ್ ಮಂಗಳವಾರ ಸುಗಮವಾಗಿ ನಡೆದಿದ್ದು, ಸ್ಥಳ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ಡಿಡಿಪಿಐ ರೇವಣಸಿದ್ದಪ್ಪ ಆದೇಶಪತ್ರ ವಿತರಿಸಿದರು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿಯಲ್ಲಿ ಸರ್ವಶಿಕ್ಷಣ ಅಭಿಯಾಣದ ಕಚೇರಿಯಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಿದ್ದು, ವರ್ಗಾವಣೆಯಲ್ಲಿ ಶಾಲೆ ಆಯ್ಕೆ ಮಾಡಿಕೊಂಡ ಶಿಕ್ಷಕರಿಗೆ ಸ್ಥಳದಲ್ಲೇ ಆದೇಶ ಪತ್ರ ನೀಡುವ ಮೂಲಕ ಶಿಕ್ಷಕರ ಅಲೆದಾಟ ತಪ್ಪಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಡಿಡಿಪಿಐ ತಿಳಿಸಿದರು.
ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣ ಆನ್‌ಲೈನ್‌ನಲ್ಲಿ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆಸಲಾಗಿದೆ, ಪಾರದರ್ಶಕತೆ ಕಾಪಾಡಿರುವುದರಿಂದ ಯಾವೊಬ್ಬ ಶಿಕ್ಷಕರು ತೊಂದರೆಯಾಗಿರುವ ಕುರಿತು ಆರೋಪ ಮಾಡಲು ಅವಕಾಶ ನೀಡಿಲ್ಲ ಎಂದರು.
ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವರ್ಗಾವಣೆ ಪ್ರಕ್ರಿಯೆ ಇದೀಗ ನಡೆದಿದ್ದು, ಕೌನ್ಸಿಲಿಂಗ್‌ನಲ್ಲಿ ಶಿಕ್ಷಕರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಂಡಿದ್ದ ಶಿಕ್ಷಕರಿಗೆ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಊಟೋಪಚಾರ, ಕೂರಲು ಪೆಂಡಾಲ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೌನ್ಸಿಲಿಂಗ್ ಪ್ರಕ್ರಿಯೆ ಡಿಡಿಪಿಐ ರೇವಣಸಿದ್ದಪ್ಪ ಅವರ ನೇತೃತ್ವದಲ್ಲಿ ನಡೆದಿದ್ದು, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಡಿವೈಪಿಸಿ ಗಂಗರಾಮಯ್ಯ, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ,ಕೃಷ್ಣಪ್ಪ, ವೆಂಕಟೇಶಪ್ಪ, ಕಚೇರಿ ಅಧೀಕ್ಷಕರಾದ ಗೋವಿಂದಗೌಡ, ಮಂಜುನಾಥರೆಡ್ಡಿ, ಸಿಬ್ಬಂದಿ ಲಕ್ಷ್ಮಣ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ಡಿ.೬ ರವರೆಗೂ ಉಳಿದಂತೆ ಡಿ.೧ ರಂದು ಕ್ರಮಸಂಖ್ಯೆ ೬೦೦ ರಿಂದ ಅಂತ್ಯದವರೆಗೂ ಭಾಗವಹಿಸಲು ಸೂಚಿಸಿದೆ. ಇದೇ ದಿನ ಪ್ರಾಥಮಿಕ ದೈಹಿಕ ಶಿಕ್ಷಕರು ಕ್ರಮಸಂಖ್ಯೆ ೧ ರಿಂದ ಅಂತ್ಯದವರೆಗೂ ಭಾಗವಹಿಸಬೇಕಾಗಿದೆ.
ಡಿ.೨ರಿಂದ ಗುರುವಾರ ಪ್ರೌಢಶಾಲಾ ಶಿಕ್ಷಕರ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿ ಎಂದು ಡಿಡಿಪಿಐ ರೇವಣಸಿದ್ದಪ್ಪ ತಿಳಿಸಿದ್ದಾರೆ.