ಪ್ರಾಥಮಿಕ ಶಾಲಾ ಶಿಕ್ಷಕರ ರಕ್ಷಣೆಗೆ ಮೇಲ್ಮನವಿ ಸಲ್ಲಿಸಲು ಸಂಕನೂರ ಒತ್ತಾಯ

ಧಾರವಾಡ ಮೇ.30:ರಾಜ್ಯದಲ್ಲಿ 1 ರಿಂದ 5 ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಸಹಶಿಕ್ಷಕರು ಪ್ರೌಢಶಾಲಾ ಸಹಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ಹೊಂದಲು ಅರ್ಹರಿಲ್ಲ ಮತ್ತು ಹಾಗೆ ನೀಡಿದ್ದಲ್ಲಿ ಅದನ್ನು ರದ್ದುಪಡಿಸಬೇಕೆಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ತೀರ್ಪಿಗೆ ಸರ್ಕಾರವು ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಕ್ಷಣೆ ನೀಡಲು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಒತ್ತಾಯಿಸಿದ್ದಾರೆ.
ಸದ್ಯದ `ಸಿ&ಆರ್’ ದಲ್ಲಿ 2016-17ರ ಪೂರ್ವದಲ್ಲಿ 1 ರಿಂದ 7 ತರಗತಿಗಳಿಗೆ ನೇಮಕವಾದ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಬಡ್ತಿ ನೀಡುವ ಅವಕಾಶ ಇದ್ದ ಹಿನ್ನೆಲೆಯಲ್ಲಿ ಕಳೆದ ಸುಮಾರು 25ಕ್ಕೂ ಹೆಚ್ಚು ವರ್ಷಗಳಿಂದ ಪದೋನ್ನತಿ ನೀಡುತ್ತಾ ಬಂದಿರುವರು. ಆದರೆ ಇಲಾಖೆಯ ಲೋಪದೋಷದಿಂದ ಸರ್ಕಾರ ಇತ್ತೀಚಿನ ದಿನಗಳಲ್ಲಿ 6 ರಿಂದ 8ಕ್ಕೆ ನೇಮಕ ಮಾಡಿಕೊಂಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ಹುದ್ದೆಗೆ ಪದೋನ್ನತಿ ನೀಡಲು ಸಿ&ಆರ್ ದಲ್ಲಿ ಅವಕಾಶ ಕಲ್ಪಿಸದೇ ಇರುವುದರಿಂದ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಈ ರೀತಿಯ ತೀರ್ಪು ನೀಡಿರಲು ಸಾಧ್ಯವಿದೆ.ಆದ್ದರಿಂದ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಪದೋನತ್ತಿ ನೀಡಲು ಸಿ & ಆರ್ ಸೂಕ್ತ ತಿದ್ದುಪಡಿ ಮಾಡಲು ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ಸಹಶಿಕ್ಷಕರ ಗ್ರೇಡ್-2 ಹುದ್ದೆಗೆ ಪದೋನ್ನತಿ ಹೊಂದಿರುವ ಸುಮಾರು 8000 ಶಿಕ್ಷಕರ ರಕ್ಷಣೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶಕುಮಾರ ಅವರು ಕಾನೂನಾತ್ಮಕವಾಗಿ ಕ್ರಮ ಜರುಗಿಸಿ ಆ ಶಿಕ್ಷಕರ ರಕ್ಷಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ತಿಳಿಸಿರುತ್ತಾರೆ.ಹಾಗಾಗಿ ಬಡ್ತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರು ಆಂತಕಕ್ಕೆ ಒಳಗಾಗುವುದು ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.