ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಗುರುತಿಸಿ ತಪಾಸಣೆಗೆ ಒಳಪಡಿಸಿ

ಚಿತ್ರದುರ್ಗ, ಏ.20; 
ಕೋವಿಡ್-19 ಸೋಂಕಿತರಿಗೆ ಸಂಬಂಧಿಸಿದಂತೆ 10 ಪ್ರಾಥಮಿಕ ಸಂಪರ್ಕಿತರು ಹಾಗೂ 20 ದ್ವಿತೀಯ ಸಂಪರ್ಕಿತರು ಸೇರಿದಂತೆ ಒಂದು ಕೋವಿಡ್ ಪ್ರಕರಣಕ್ಕೆ ಕನಿಷ್ಟ 30 ಸಂಪರ್ಕಿತರನ್ನು ಕಡ್ಡಾಯವಾಗಿ ಗುರುತಿಸಿ ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಕೋವಿಡ್ ನಿಯಂತ್ರಣ ಕುರಿತ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಗುರುತಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಚಿತ್ರದುರ್ಗಕ್ಕೆ ವಾಹನಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಬೆಂಗಳೂರಿನಿಂದ ಹಿರಿಯೂರಿಗೆ ಬಹಳಷ್ಟು ಜನರು ಪ್ರಯಾಣಿಸುತ್ತಾರೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಿಂದ ಹಿರಿಯೂರಿಗೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವವರನ್ನು ತಪಾಸಣೆಗೆ ಒಳಪಡಿಸಿಬೇಕು. ಹಿರಿಯೂರು, ಮೊಳಕಾಲ್ಮುರು, ರಾಂಪುರ, ರಾಯದುರ್ಗ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ತಪಾಸಣಾ ಸ್ಥಳಗಳನ್ನು ಗುರುತಿಸಿ, ಪೊಲೀಸ್, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ತಂಡದೊಂದಿಗೆ ತಪಾಸಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಹೊರರಾಜ್ಯ, ಹೊರದೇಶದಿಂದ ಬಂದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ: ಹೊರರಾಜ್ಯ, ಹೊರದೇಶದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿ 10 ದಿನ ಸ್ವಯಂಪ್ರೇರಿತರಾಗಿ ಹೋಂ ಕ್ವಾರಂಟೈನ್ ಆಗಬೇಕು. ಜಿಲ್ಲೆಯಿಂದ ಕುಂಭಮೇಳಕ್ಕೆ ಹೋದವರು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಐಸೋಲೇಟ್ ಆಗಿ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಮದುವೆ ಸಮಾರಂಭಗಳಿಗೆ ಪಾಸ್: ಮದುವೆ ಸಮಾರಂಭಗಳಿಗೆ ಕಲ್ಯಾಣ ಮಂಟಪಕ್ಕೆ ಸಂಬಂಧಿಸಿದಂತೆ ಒಳಾಂಗಣ ಸಭಾಂಗಣ 100, ಹೊರಾಂಗಣ ಆವರಣದಲ್ಲಿ ನಡೆದರೆ 200 ಜನರಿಗೆ ಅವಕಾಶವಿದ್ದು, ಆಯಾ ತಾಲ್ಲೂಕಿನ ತಹಶೀಲ್ದಾರ್‍ಗಳಿಂದ ಪಾಸ್ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.  
ಕಲ್ಯಾಣ ಮಂಟಪದ ಮಾಲೀಕರು ಕಡ್ಡಾಯವಾಗಿ ಕೋವಿಡ್ ನಿಯಮಾವಳಿ ಪಾಲಿಸಬೇಕು. ನಿಯಮ ಪಾಲನೆ ಮಾಡದಿದ್ದರೆ ಕಲ್ಯಾಣ ಮಂಟಪದ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ,
ಗ್ರಾಮೀಣ ಪ್ರದೇಶಗಳಲ್ಲಿ ಮನೆ, ದೇವಸ್ಥಾನಗಳಲ್ಲಿ ಹಾಗೂ ಸ್ಥಳೀಯವಾಗಿ ನಡೆಯುವ ಮದುವೆ ಸಮಾರಂಭಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು.  
ಖಾಸಗಿ ಆಸ್ಪತ್ರೆಯ ಶೇ.50 ಹಾಸಿಗೆ ಮೀಸಲು: ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಕೋವಿಡ್ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ಗಳನ್ನು ಪ್ರಾರಂಭಿಸುವ ಅಗತ್ಯ ಬರಬಹುದು. ಹಾಗಾಗಿ ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಾತ್ರೆಗಳು ನಿಷೇಧ: ಜಿಲ್ಲೆಯಲ್ಲಿ ಮೇ 31ರವರೆಗೆ ಯಾವುದೇ ಜಾತ್ರೆಗಳು ನಡೆಯದಂತೆ ಸಂಬಂಧಪಟ್ಟ ತಹಶೀಲ್ದಾರ್‍ಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಾತ್ರೆಗಳ ನಿಷೇಧದ ಕುರಿತು ಸಂಬಂಧಪಟ್ಟವರಿಗೆ ಒಂದು ತಿಂಗಳ ಮುಂಚಿತವಾಗಿಯೇ ಮಾಹಿತಿ ನೀಡಬೇಕು. ಮುಷ್ಕರ, ಧರಣಿ, ಪ್ರತಿಭಟನೆಗೂ ಅವಕಾಶವಿಲ್ಲ ಎಂದು ಹೇಳಿದರು.
ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ ನಗರದ ತರಕಾರಿ ಮಾರುಕಟ್ಟೆಯ ಸ್ಥಳವನ್ನು ಬದಲಾವಣೆ ಮಾಡಿ ವಿವಿಧ ಮೈದಾನಗಳಲ್ಲಿ ಅಂತರ ಕಾಪಾಡಿಕೊಂಡು ತರಕಾರಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.  ಇದೇ ರೀತಿ ತಾಲ್ಲೂಕಿನ ತಹಶೀಲ್ದಾರ್‍ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಸಂತೆಗಳಲ್ಲಿ ಜನರು ಗುಂಪುಗೂಡದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಉಪವಿಭಾಗಾಧಿಕಾರಿ ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಖಾಸಗಿ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.