ಪ್ರಾಥಮಿಕ ಜ್ಞಾನ ಇರುವುದು ಅಗತ್ಯ: ಬಳ್ಳಾರಿ

ಬ್ಯಾಡಗಿ, ಮೇ20: ಆರೋಗ್ಯ ರಕ್ಷಣೆಯಲ್ಲಿ ಸಮುದಾಯ ಶಿಕ್ಷಣವು ಅತ್ಯಂತ ಪ್ರಧಾನವಾದ ಪ್ರತಿಬಂಧಕ ಕ್ರಮವಾಗಿದೆ. ಕಾಯಿಲೆಗಳಿಂದ ಸ್ವಯಂ ರಕ್ಷಿಸಿಕೊಳ್ಳುವುದು ಮತ್ತು ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಯುವ ಕಾರ್ಯವಿಧಾನಗಳ ಬಗ್ಗೆ ಜನರಲ್ಲಿ ಪ್ರಾಥಮಿಕ ಜ್ಞಾನ ಇರುವುದು ಅತ್ಯಂತ ಅಗತ್ಯವಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್’ನಲ್ಲಿ ಇರುವ ಸೋಂಕಿತರಿಗೆ ಬಿಜೆಪಿ ಯುವ ಮುಖಂಡರಾದ ವಿಜಯಭರತ ಬಳ್ಳಾರಿ ಹಾಗೂ ಶಿವಯೋಗಿ ಶಿರೂರ ಅವರುಗಳು ಉಚಿತವಾಗಿ ನೀಡಿದ ಗುಣಮಟ್ಟದ ಸೊಳ್ಳೆ ಪರದೆ ಮತ್ತು ಬೆಡ್’ಶೀಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಯಾವುದೇ ವಿಧವಾದ ಜ್ವರ ಕಂಡುಬಂದರೂ ಸ್ವಯಂ ಚಿಕಿತ್ಸೆ ನಡೆಸುವುದು ಸಲ್ಲದು. ಸನಿಹದಲ್ಲಿರುವ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಲಸಿಕೆಗಳ ಬಗ್ಗೆ ತಿಳಿದುಕೊಳ್ಳಿ. ರೋಗಪತ್ತೆಯು ಬೇಗನೆ ಸಾಧ್ಯವಾದರೆ ಅನಾರೋಗ್ಯದಿಂದ ದೀರ್ಘಕಾಲ ಬಳಲುವುದು ತಪ್ಪುತ್ತದೆ. ಕೋವಿಡ್ ಸೋಂಕಿನಿಂದ ಹಲವಾರು ಜನರು ಪ್ರಾಣಾಂತಿಕವಾಗಿ ನರಳುವಂತಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕು ಎಂದರಲ್ಲದೇ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದರು.
ಬಿಜೆಪಿ ಯುವಮುಖಂಡ ವಿಜಯ ಭರತ ಬಳ್ಳಾರಿ ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮದೊಂದಿಗೆ ಕೀಟನಾಶಕ ಸಿಂಪಡನೆಯು ಅತ್ಯಗತ್ಯವಾಗಿದೆ. ಮನೆ ಮತ್ತು ಸುತ್ತಮುತ್ತ ನೀರು ನಿಂತರೆ ಅಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿಯಾಗುತ್ತದೆ. ಹೀಗಾಗಿ ಮನೆಯೊಳಗೆ ಮತ್ತು ಹೊರಗೆ ಕಳಪೆ ನೈರ್ಮಲ್ಯ ಕ್ರಮಗಳು ಅನೇಕ ಸಾಂಕ್ರಾಮಿಕ ಕಾಯಿಲೆಗಳ ವೃದ್ಧಿ ಮತ್ತು ಪ್ರಸರಣಕ್ಕೆ ಹೆಬ್ಟಾಗಿಲು ತೆರೆಯುತ್ತವೆ. ಸೊಳ್ಳೆಗಳ ವಿರುದ್ಧ ವೈಯುಕ್ತಿಕ ರಕ್ಷಣಾ ಕ್ರಮಗಳು ಮತ್ತು ಪ್ರತಿರೋಧ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅರಿವನ್ನು ಹೆಚ್ಚಿಸುವ ವಿಚಾರದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಪಕ್ಷದ ಮುಖಂಡರಾದ ಸುರೇಶ ಯತ್ನಳ್ಳಿ, ನ್ಯಾಯವಾದಿ ಸಂಘದ ಅಧ್ಯಕ್ಷ ಎನ್.ಎಸ್ ಬಟ್ಟಲಕಟ್ಟಿ, ಎಂ.ಎಲ್.ಕಿರಣ, ಸಂಜೀವ ಮಡಿವಾಳರ, ಶಿವಯೋಗಿ ಗಡಾದ, ಸುರೇಶ ಚಲುವಾದಿ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪುಟ್ಟರಾಜ, ಡಾ.ನಾಗರಾಜ, ಡಾ.ಮಾಲತೇಶ ಕಂಬಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.