ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಶ್ರವಣ ದಿನ ಆಚರಣೆ

ಕಲಬುರಗಿ.ಮಾ.04:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಲಬುರಗಿಯ ಶಿವಾಜಿ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಶ್ರವಣ ದಿನಾಚರಣೆಯನ್ನು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಶೇಖರ ಮಾಲಿ ಅವರು ಶುಕ್ರವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿಮ್ಸ್‍ನ ಇಎನ್‍ಟಿ ತಜ್ಞ ವೈದ್ಯಾಧಿಕಾರಿ ಡಾ. ವಸೀಮ್ ಅವರು ಮಾತನಾಡಿ, ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣೆಗಾಗಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಮಾಹಿತಿ ನೀಡಿದರು.

   ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ  ಅವರು  ದಿನಾಚರಣೆ ಅಂಗವಾಗಿ ಜಿಮ್ಸ್ ಆಸ್ಪತ್ರೆಯ ಇಎನ್‍ಟಿ ವಿಭಾಗದ ಸಹಯೋಗದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಮಾರ್ಚ್ 3 ರಿಂದ 10 ರವರೆಗೆ  ಹಾಗೂ 50 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಉಚಿತ ಶ್ರವಣ ತಪಾಸಣೆ ಮಾಡಲಾಗುತ್ತಿದೆ. ಈ ಶಿಬಿರದ ಸದುಪಯೋಗ ಪಡೆಯಬೇಕು. ಇದಲ್ಲದೇ ಜಿಲ್ಲೆಯ ಎಲ್ಲಾ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ವಿಶ್ವ ಶ್ರವಣ ದಿನಾಚರಣೆಯನ್ನು  ಆಚರಿಸಬೇಕು ಎಂದರು. 
   ಜಿಲ್ಲೆಯ ಸಂಬಂಧಪಟ್ಟ ಆಯಾ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು  ಜಿಲ್ಲೆಯ ಎಲ್ಲಾ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಭ್ಯವಿರುವ ಇಎನ್‍ಟಿ ತಜ್ಞ ವೈದ್ಯಾಧಿಕಾರಿಗಳಿಂದ ಶ್ರವಣವನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. 
  ಕಾರ್ಯಕ್ರಮದಲ್ಲಿ ಡಾ:ವಿನೋದ, ಶ್ರೀ ಮಲ್ಲಣ್ಣಾ ಟೋಕಾಪೂರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ  ಡಾ.ಸಂಧ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರು.