ಪ್ರಾಣಿ ಸತ್ತಾತ್ಮಕ ಮೌಲ್ಯದ -ಪ್ರಾಣಿ ಪ್ರಭುತ್ವ  ಸರ್ಕಾರ!*

ಖಂಡ ಖಂಡ ವಿಭಜಿತ ಜಗತ್ತಿನೊಳಗೆ ಏಷ್ಯಾಖಂಡವೂ ಒಂದು. ಅದರೊಳಗೆ  ಹಲವು ದೇಶಗಳು. ಅದರಲ್ಲಿ ಒಂದು ಸಂಪದ್ಭರಿತ ಸಂಸ್ಕೃತಿಮಯ; ಅನೇಕತೆಯಲ್ಲಿ ಏಕತೆಯ  ಮಾನವತಾ  ಧರ್ಮವನ್ನು  ಸಾರುವ  ಭಾವಜೇನಿನ  ಸಾಕಾರದೀಪ್ತಿಯ   ದೇಶ- ಭಾರತ ಎಂಬುದು. ಅದರ ದಕ್ಷಿಣಕ್ಕೆ  ಫಲವತ್ತಾದ, ಕಂಪಾದ, ರಸಋಷಿ ಸಂತರು ಕಟ್ಟಿದ ಔದಾರ್ಯದ ನೆಲವೀಡು- ಕರುನಾಡು. ಅದರೊಳಗೆ ಬಂಡೀಪುರ ಎಂಬ ಭಯಂಕರ ಕಾಡು. ಹುಲಿಗಳೇ ಅಲ್ಲಿ ಜಾಸ್ತಿ ಇದ್ದರೂ, ಸಿಂಹ ಆನೆಗಳಿಂದ ಹಿಡಿದು ಉಳಿದೆಲ್ಲಾ ಪ್ರಾಣಿಗಳ ಸಂತತಿಯೂ ಕೂಡ ಕಡಿಮೆ ಏನೂ ಇರಲಿಲ್ಲ.  ಪರಂಪರಾಗತವಾಗಿ ಸಿಂಹ ಸಂತತಿಯೇ  ಕಾಡಿನ ರಾಜನಾಗಿ  ವಂಶಪಾರಂಪರ್ಯ ಆಳ್ವಿಕೆ ಮಾಡಿಕೊಂಡು ಬಂದ ರೂಢಿಯೇ ಈಗಲೂ ಮುಂದುವರಿದಿತ್ತು. ಹೀಗೆ ಇರಲು ಕಾಲಕ್ರಮೇಣ  ಸಿಂಹಗಳಿಗೆ  ಬೇಟೆ ಕೊರತೆಯಾಗಿ, ಆವಾಸದ ಅಭಾವವಾಗಿ, ಮನುಷ್ಯನ ಅತಿಕ್ರಮಣದ ಪರಿಣಾಮವಾಗಿ, ಕೆಲವೊಮ್ಮೆ ಜನರು ತಮಗೆ ಬೇಕಾದ ಸಾಕುಪ್ರಾಣಿಗಳನ್ನು ರಕ್ಷಿಸಲು ಸಿಂಹಗಳನ್ನು ಕೊಂದುದರ ಪರಿಣಾಮವಾಗಿ ಸಿಂಹಗಳ ಸಂತತಿಯು ತೀರ ಕಡಿಮೆಯಾಯಿತು! ಸಂತತಿ ಕಡಿಮೆಯಾದರೂ ಸಿಂಹದ ಬಲ ಕಡಿಮೆ ಆಗಿರಲಿಲ್ಲ. ಆದರೆ ಕಾಲಕ್ರಮೇಣ ನರಿಗಳು, ತೋಳಗಳು, ಕಿರುಬುಗಳು  ತಮ್ಮ ಸಣ್ಣತನಗಳಿಂದ ಇಡೀ ಕಾಡಿನ ಪರಿಸರದ ಶಾಂತಿಯನ್ನೇ  ಹದಗೆಡಿಸಿದವು. ಸಿಂಹವೇ ಏಕೆ ಕಾಡಿನ ರಾಜನಾಗಬೇಕು? ಆನೆ, ಹುಲಿ, ಚಿರತೆ, ಕರಡಿ, ಕಾಡುಹಂದಿ, ತೋಳ  ಅಥವಾ ನಾವು ನರಿ ಪ್ರಾಣಿಗಳು ಏಕಾಗಬಾರದು!? ಎಂದೆಲ್ಲಾ ಗಲಭೆ ಎಬ್ಬಿಸಿ, ಪಂಚಾಯಿತಿ ಮಾಡಿದವು. ಆಗ ಹಿರಿಯ  ಸಿಂಹರಾಜನು “ನಾವೇನೂ ನಮ್ಮನ್ನು ರಾಜನನ್ನಾಗಿ ಮಾಡಿರಿ ಎಂದು ಕೇಳಿಲ್ಲ! ಈ ಕಾಡು  ಆದಿ ಕಾಲದಿಂದಲೂ  ಸಿಂಹ ಎಂದರೆ- ಶಕ್ತಿ! ಎಂದು ಅನುಭವಪಟ್ಟು ಒಪ್ಪಿಕೊಂಡಿದೆ! ನಾವು ಸಿಂಹಗಳಿಗೂ ಅನ್ನಿಸುತ್ತೆ! “ನಾವೇ ರಾಜ ” ಅಂತ!  ಆ ಅನುಭವವೇ ನಮ್ಮನ್ನು ರಾಜನಂತೆ ಇರಿಸಿದೆ! ಎಂದಿತು.” ಆಗ ಮತ್ತಷ್ಟೂ ಕೋಲಾಹಲವುಂಟಾಗಲು,,, ಸಿಂಹರಾಜನು ಬೇಕಾದರೆ ನಿಮಗೆ ಯಾರನ್ನು ರಾಜನನ್ನಾಗಿ ಮಾಡಬೇಕೆನ್ನಿಸಿದೆ,,,ಅವರನ್ನೇ ನೇಮಕ ಮಾಡಿಕೊಳ್ಳಿ!? ಎಂದಿತು. ಆಗ ಹಿರಿಯ ನರಿಯು ನಾನು ನಿನ್ನೆ ಜನರಿರುವ ನಾಡಿಗೆ ಹೋಗಿದ್ದೆ. ಅಲ್ಲಿ ಜನರು ತಮ್ಮ ನಾಯಕನನ್ನು  ಆರಿಸಲು ಚುನಾವಣೆ ನಡೆಸುತ್ತಿರುವುದನ್ನು  ಕಂಡೆ! ಅದಕ್ಕಾಗಿ ಚುನಾವಣಾ ಆಯೋಗ,   ರಾಜಕೀಯ ಪಕ್ಷಗಳು, ಪ್ರಜಾಪ್ರಭುತ್ವ ಸರ್ಕಾರ, ಚುನಾವಣೆ, ಮತದಾನ, ಮತದಾನ ತರಬೇತಿ ಅನ್ನುವಂತಹ  ಯೋಜಿತ   ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ನಾವು ಹಾಗೆಯೇ  ಯೋಜನೆ ತಯಾರಿ ಮಾಡಿಕೊಂಡು ಚುನಾವಣೆ ನಡೆಸಿ ನಮ್ಮ ಕಾಡಿನ ರಾಜನನ್ನು ಆಯ್ಕೆ ಮಾಡೋಣ ಎಂದಿತು! ಆಗ ಇತರೆ ಪ್ರಾಣಿಗಳು ಅದು ಹೇಗೆ ಸಾಧ್ಯ ನರಿಯಣ್ಣ!?  ಸ್ವಲ್ಪ ವಿವರಿಸಿ ಹೇಳು ,,,ಎಂದವು! ಆಗ ನರಿಯು- ಜನರು ಜನರಿಂದ ಜನರಿಗಾಗಿ ನಡೆಸುವ ಸರ್ಕಾರವನ್ನು ಪ್ರಜಾಸತ್ತಾತ್ಮಕ ಮೌಲ್ಯದ    ಪ್ರಜಾಪ್ರಭುತ್ವ  ಸರ್ಕಾರ ಎನ್ನಲಾಗುತ್ತದೆ! ಅದೇ ತರಹ ನಾವು ಪ್ರಾಣಿಗಳು ಪ್ರಾಣಿಗಳಿಂದ ಪ್ರಾಣಿಗಳಿಗೋಸ್ಕರ ಮಾಡಿಕೊಂಡು ನಡೆಸುವ ಸರ್ಕಾರವನ್ನು ಪ್ರಾಣಿಸತ್ತಾತ್ಮಕ   ಮೌಲ್ಯದ  ಪ್ರಾಣಿಪ್ರಭುತ್ವ  ಸರ್ಕಾರ ಎಂದು ಕರೆಯೋಣ!  ಎಂದಿತು. ಅದಕ್ಕೆ ತೋಳವು ಸರ್ಕಾರವನ್ನು  ರಚಿಸಲು ಚುನಾವಣೆ ನಡೆಸಬೇಕು. ಅದಕ್ಕಾಗಿ    ಚುನಾವಣಾ ಸಾಮಗ್ರಿಗಳು ಬೇಕಲ್ಲಾ  ಹೇಗೆ ಮಾಡುವುದು!? ಜೊತೆಗೆ ನಮಗ್ಯಾರಿಗೂ ಚುನಾವಣಾ ಜ್ಞಾನ ಬೇರೆ ಇಲ್ಲ!? ಹೇಗೆ ಆ ಜ್ಞಾನ ಪಡೆಯುವುದು ಅಂದಾಗ,,ಚುನಾವಣಾ ಆಯೋಗದ ಅಧ್ಯಕ್ಷನಾದ ಹಿರಿಯ  ಆನೆಯು ,,,ನಾವು ಬಹುದೊಡ್ಡ ಗಾತ್ರದ ಪ್ರಾಣಿಗಳಾದ್ದರಿಂದ  ನಾಡಿನೊಳಗೆ ನಮ್ಮ ಸಂತತಿ  ಹೋದರೆ ಜನರ ಕೈಗೆ ಬೇಗ ಸಿಕ್ಕಿ ಬಿಡುತ್ತೇವೆ! ಆದ್ದರಿಂದ ಕಾಡಿನ ಹತ್ತಾರು ನಾಯಿಗಳೇ  ನಾಡಿನ ನಾಯಿಗಳಂತೆ ಸಾಧುಗಳಾಗಿ,  ನಾಡಿನೊಳಗೆ,,,ಎಲ್ಲಿ ಚುನಾವಣಾ ತರಬೇತಿಗಳು  ನಡೆಯುತ್ತಿರುತ್ತವೆ ಆ ತರಬೇತಿಯ  ಹಾಲ್ ಗಳ   ಹೊರಭಾಗದ ಕಿಟಕಿ ಸಮೀಪ ನಿಂತು ಚುನಾವಣೆ ಮಾಡುವ ವಿಧಾನ, ಮತದಾನ ನಡೆಸುವ ಪ್ರಕ್ರಿಯೆಯ ಎಲ್ಲಾ ಪ್ರಾಯೋಗಿಕ ಜ್ಞಾನ ತಿಳಿದು ಬಂದು, ಅದನ್ನು  ಕಾಡಿನಲ್ಲಿ ಚುನಾವಣೆ ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು  ಹೊತ್ತ  ತಮ್ಮದೇ ಸಂತತಿಯ  ಇತರೆ ಕಾಡು ನಾಯಿಗಳಿಗೆ  ನೀಡುವಂತಾಗಲಿ,,,,ಎಂದಿತು! ಆಗ ನರಿಯು  ನಮ್ಮ ಕಾಡಿನ ದೊಡ್ಡ ಪ್ರಾಣಿ, ಚುನಾವಣಾ ಆಯೋಗದ ಅಧ್ಯಕ್ಷ ಹಿರಿಯ  ಆನೆ ಹೇಳಿದ್ದು ಸರಿ ಇದೆ! ಹಾಗೆಯೇ ಮಾಡೋಣ ಎಂದಿತು! ಆದರೆ ಸಿಂಹಗಳು  ತಮ್ಮ ಪಾಡಿಗೆ ತಾವು  ಪ್ರಕೃತಿ ಭಾವದಲ್ಲಿ ತಮ್ಮ ವ್ಯಕ್ತಿತ್ವವೇ ಮಾತಾಡುವಂತೆ  ಗಂಭೀರವಾಗಿದ್ದವು! ಆನೆಯ ಸಲಹೆಯಂತೆ, ಪೂರ್ವಯೋಜನೆಯಂತೆ ಕಾಡಿನ ಹತ್ತಾರು  ಬೇಟೆನಾಯಿಗಳು ಸಾಧುನಾಯಿಗಳಂತೆ ತರಬೇತಿ ನಡೆಯುವ ಕಟ್ಟಡಗಳ ಹೊರಗೆ ಕಿಟಕಿ ಬಳಿ ನಿಂತು, ತರಬೇತಿಯಿಂದ ಚುನಾವಣಾ ಜ್ಞಾನ  ಚಂದ ತಿಳಿದು  ಬಂದವು! ತಮ್ಮ ಕಾಡಿನ ಎಲ್ಲಾ  ಪ್ರಾಣಿಗಳ ಮರಿಗಳನ್ನು  ಬಿಟ್ಟು, ಉಳಿದ ಎಲ್ಲಾ  ಮತಹಾಕುವ   ಪ್ರಾಣಿಗಳ ಹೆಸರಿನ ರಿಜಿಸ್ಟರ್ 17ಎ ಯನ್ನು ಸಿದ್ಧಪಡಿಸಿಕೊಂಡವು!   ಆನೆ,  ಚಿರತೆ, ಹುಲಿಗಳು ಅದೇನು  ಚಿಂತನೆ ಮಾಡಿದವೋ  ತಾವು ಚುನಾವಣಾ ಅಭ್ಯರ್ಥಿಗಳಾಗಿ ನಿಲ್ಲುವುದಿಲ್ಲ ಆದರೆ ಏಜೆಂಟರಾಗಿ ಕೆಲಸ ನಿರ್ವಹಿಸುತ್ತೇವೆ! ಎಂದು ಕಾಡಿನ ರಾಜನಾಗಲು  ಅಭ್ಯರ್ಥಿಗಳಾಗಿ ನಿಂತಿದ್ದ  ನರಿ, ತೋಳ, ಕಿರುಬ, ಕರಡಿಗೆ  ಏಜೆಂಟರಾದವು. ಚುನಾವಣೆ ಕೆಲಸಕ್ಕೆ   ಕಾಡು ನಾಯಿಗಳನ್ನು  ನೇಮಕ ಮಾಡಲಾಯಿತು!  ನಾಡ ಜನರ ಚುನಾವಣೆ ಮುಗಿದು ಅಲ್ಲಿ ಸರ್ಕಾರ ರಚನೆ ಆದ ಮೇಲೆ, ಚುನಾವಣಾ ಸಾಮಗ್ರಿಗಳನ್ನು ಇರಿಸಲಾಗಿದ್ದ, ಕೋಣೆಗಳ ಬೀಗ ಹೊಡೆದು ಅವುಗಳನ್ನು ಕಾಡಿಗೆ ಕದ್ದು ತರುವಂತಹ ಕೆಲಸವನ್ನು  ಹುಲಿ ಕುದುರೆಗಳಿಗೆ  ವಹಿಸಲಾಯಿತು! ಅವುಗಳು ಬಹಳ ಯೋಜನೆ ಹಾಗೂ ಜಾಗ್ರತೆಯಿಂದ ಸುರಕ್ಷತೆ ಮಾಡಿ ಚುನಾವಣಾ ಸಾಮಗ್ರಿಗಳಾದ ಕಂಟ್ರೋಲ್ ಯೂನಿಟ್,(ಸಿಯು) ಬ್ಯಾಲೆಟ್ ಯೂನಿಟ್ (ಬಿಯು) ವಿವಿಪ್ಯಾಟ್, ಸಾಮಾನ್ಯ   ಅಡ್ರೆಸ್  ಟ್ಯಾಗ್,     ವಿಶೇಷ  ಟ್ಯಾಗ್, ಹಸಿರು ಪೇಪರ್ ಸೀಲ್, ಬಾಣದ ಕತ್ತರಿ ಗುರುತಿನ ರಬ್ಬರ್ ಸ್ಟಾಂಪ್, ಸ್ಟಾಂಪ್ ಪ್ಯಾಡ್, ಪಿಆರ್ ಓ ರವರ ಲೋಹದ ಸೀಲ್, ಪಿಆರ್ ಓ- ಡೈರಿ, ಮೊದಲಾದ ಎಲ್ಲಾ ಅಗತ್ಯ ಚುನಾವಣಾ ಸಾಮಗ್ರಿಗಳನ್ನು  ಕಾಡಿಗೆ ತಂದವು!  ಪ್ರಾಣಿಗಳೆಲ್ಲ ಕಲೆತು,  ಚುನಾವಣೆಗೆ ತಯಾರಿ ಮಾಡಿಕೊಂಡವು!  ಕಾಡಿನಲ್ಲಿ  ಎಲ್ಲಾ ತರಹದ ಪಕ್ಷಿ ಗಳಿಗಾಗಿ  ಒಂದು ಮತಗಟ್ಟೆ,  ಗಾತ್ರದಲ್ಲಿ ತುಂಬಾ ಹಿರಿದಾದ ಪ್ರಾಣಿಗಳಿಗಾಗಿ ಒಂದು ಮತಗಟ್ಟೆ, ಉಳಿದೆಲ್ಲಾ    ಕಿರಿದಾದ ಗಾತ್ರ ಹೊಂದಿದ ಪ್ರಾಣಿಗಳಿಗೆ ಒಂದು ಮತಗಟ್ಟೆ, ಜಲಚರ ಪ್ರಾಣಿಗಳಿಗಾಗಿ  ನದಿ ತೀರದಲ್ಲಿ ಒಂದು ಮತಗಟ್ಟೆ  ಹೀಗೆ ನಾಲ್ಕು ಮತಗಟ್ಟೆಗಳನ್ನು  ವ್ಯವಸ್ಥೆ   ಮಾಡಲಾಯಿತು!  ನಂತರ   ಚುನಾವಣೆ ನಡೆಸುವ ಇತರ ಕಾಡುನಾಯಿಗಳನ್ನು  ಒಂದೆಡೆ ಕರೆದು ಎಂ ಆರ್ ಪಿ – ಕಾಡುನಾಯಿಗಳು  ಚುನಾವಣೆ ನಡೆಸುವ ವಿಧಾನದ ಬಗ್ಗೆ ಪ್ರಾಯೋಗಿಕ ಜ್ಞಾನ ತರಬೇತಿ ನೀಡಿದವು,ಅಣಕು ಮತದಾನವನ್ನು  ಎಲ್ಲಾ   ಅಭ್ಯರ್ಥಿಗಳು /ಏಜೆಂಟರ ಸಮ್ಮುಖದಲ್ಲಿ  ಬೆಳಿಗ್ಗೆ 5-30 ಕ್ಕೆ ಆರಂಭಿಸಬೇಕು. *ಅಭ್ಯರ್ಥಿಗಳು/ಉಮೇದುವಾರರು ಬಾರದಿದ್ದರೆ  5-45 ರ ತನಕ ಕಾದು ಪಿಆರ್ ಓ ಅವರು ತಮ್ಮ ಪೋಲಿಂಗ್ ಆಫೀಸರ್ ತಂಡದ ಜೊತೆ ಸೇರಿ ಅಣಕು ಮತದಾನ ಮಾಡಬೇಕು. *ಅಣಕು ಮತದಾನದ ಮೊದಲು, ಸಿಯು,  ವಿವಿಪ್ಯಾಟ್, ಬಿಯು ಗಳನ್ನು ಸಂಪರ್ಕಗೊಳಿಸುವ  ಮೊದಲು,,,, *ಸಿಯುನ ಸ್ವಿಚ್ ಆಫ್ ಮಾಡಬೇಕು  ಹಾಗೂ ವಿವಿಪ್ಯಾಟ್ ನ  ಪೇಪರ್  ರೋಲ್ ನಾಬ್  (ಅಡ್ಡಲಾಗಿರಿಸಿ)  ಲಾಕ್ ಮಾಡಬೇಕು ನಂತರ ಮೊದಲಿಗೆ, ವಿವಿ ಪ್ಯಾಟ್ ನಿಂದ ಸಿಯುನ ಹಿಂಭಾಗದ ಕಂಪಾರ್ಟ್ ಮೆಂಟ್ ನಲ್ಲಿ  ಆ ಉದ್ದೇಶಕ್ಕಾಗಿಯೇ ಒದಗಿಸಲಾದ ಸಾಕೆಟ್ ಗೆ ಸಂಪರ್ಕ ಸೇರಿಸಬೇಕು. ನಂತರ  ಬಿಯು ನ ಅಂತರ ಸಂಪರ್ಕ ಕಲ್ಪಿಸುವ ಕೇಬಲ್ ಅನ್ನು ವಿವಿ ಪ್ಯಾಟ್ ನ ಹಿಂಭಾಗದ ಕಂಪಾರ್ಟ್ ಮೆಂಟ್ ನಲ್ಲಿ ಆ ಉದ್ದೇಶಕ್ಕಾಗಿಯೇ ಒದಗಿಸಲಾದ ಸಾಕೆಟ್ ಗೆ ಸೇರಿಸಬೇಕು. *ನಂತರ ಮೊದಲಿಗೆ  ವಿವಿ ಪ್ಯಾಟ್ ನ ಪೇಪರ್ ರೋಲ್ ನಾಬ್ ಅನ್ ಲಾಕ್(ಲಂಬವಾಗಿ ಇರಿಸಿ) ಮಾಡಿ,  ಆನಂತರ  ಸಿಯು ನ ಸ್ವಿಚ್ ಅನ್ನು ಆನ್ ಮಾಡಬೇಕು. ಆಗ  ವಿವಿ ಪ್ಯಾಟ್ ನ ಪೇಪರ್ ರೋಲ್ ನಾಬ್ ನಲ್ಲಿ  ಏಳು  ಸ್ಲಿಪ್ ಬೀಳುತ್ತವೆ. *ನಂತರ ಅಣಕು ಮತದಾನದ ಮುನ್ನ ಸಿಯು ಮೇಲಿನ ಕ್ಲಿಯರ್ ಬಟನ್ ಅನ್ನು ಒತ್ತಿ, ಅದು ಎಲ್ಲಾ ಅಭ್ಯರ್ಥಿಗಳ   ಸೊನ್ನೆ ಮತಗಳನ್ನು ತೋರಿಸುವುದನ್ನು ಉಪಸ್ಥಿತ ಎಲ್ಲಾ ಅಭ್ಯರ್ಥಿ/ಏಜೆಂಟರಿಗೆ ತೋರಿಸಿ ಖಾತ್ರಿ ಮಾಡಿಸಬೇಕು. *ನಂತರ ವಿವಿ ಪ್ಯಾಟ್ ನ ಡ್ರಾಪ್ ಬಾಕ್ಸ್  ಖಾಲಿ ಇರುವುದನ್ನು ತೋರಿಸಬೇಕು. ( ಸ್ವಿಚ್ ಆನ್ ಮಾಡಿದಾಗ  ಬಿದ್ದ ಏಳು ಸಹಜ ಸ್ಲಿಪ್  ಹೊರತು  ಬೇರೆ ಮತದ ಸ್ಲಿಪ್ ಇಲ್ಲ  ಎಂದು)    *ನಂತರ ಉಪಸ್ಥಿತರಿರುವ ಅಭ್ಯರ್ಥಿ/ಉಮೇದುವಾರರಿಂದ ತಲಾ ಸಮಾನ  3 ಮತ ಬರುವಂತೆ 50 ಮತಗಳನ್ನು ಹಾಕಿಸಬೇಕು.  *ಪ್ರತಿ ಬಾರಿ ಸಿಯು ನಿಂದ ಬ್ಯಾಲೇಟ್ ಬಟನ್  ಒಮ್ಮೆ  ಒತ್ತಿ  ಬಿಯು ನಲ್  ಬೇಕಾದ ಒಂದೇ ಮತಕ್ಕೆ ಗುಂಡಿಯನ್ನು  ಒತ್ತಿ ಮತ ಚಲಾಯಿಸಬೇಕು. *ಆನಂತರ ಬೀಮ್ ಸೌಂಡ್ ಕೇಳಿ ನಿಂತ ಮೇಲೆ ಮುಂದಿನ ಮತಕ್ಕೆ   ಸಿಯುನಿಂದ     ಬ್ಯಾಲೇಟ್ ಬಟನ್ ಒತ್ತಿ,,, ಮುಂದಿನ  ಮತ ಚಲಾಯಿಸಲು ಅವಕಾಶ  ಮಾಡಬೇಕು.  *ಅಣಕು ಮತದಾನ ಮುಗಿದ ಮೇಲೆ ಸಿಯು ನ ಮೇಲಿನ ಕ್ಲೋಸ್ ಬಟನ್ ಒತ್ತಬೇಕು. *ಆನಂತರ ರಿಸಲ್ಟ್ ಬಟನ್ ಒತ್ತಬೇಕು. ನಂತರ ವಿವಿ ಪ್ಯಾಟ್ ನ ಡ್ರಾಪ್ ಬಾಕ್ಸ್ ನಿಂದ ಅಣಕು ಮತದಾನದ ಸ್ಲಿಪ್ ಗಳನ್ನು ತೆಗೆದುಹಾಕಬೇಕು. *ನಂತರ ಸಿಯು ಮತ್ತು ವಿವಿಪ್ಯಾಟ್ ನ ಕಾಗದ ಸ್ಲಿಪ್ ಗಳ ಫಲಿತಾಂಶಗಳನ್ನು ಹೋಲಿಸಿ ನೋಡಬೇಕು. *ಆನಂತರ ಸಿಯು ಮೇಲಿನ ಕ್ಲಿಯರ್ ಬಟನ್ ಒತ್ತಿ ಎಲ್ಲ ಮತಗಳನ್ನು ಅಳಿಸಬೇಕು.  *ಸಿಯು ಮತ್ತು  ವಿವಿಪ್ಯಾಟ್ ನ ಸ್ವಿಚ್ ಆಫ್ ಮಾಡಬೇಕು    *ನಂತರ ವಿವಿ ಪ್ಯಾಟ್ ಕಾಗದದ ಸ್ಲಿಪ್ ಹಿಂಭಾಗದಲ್ಲಿ ರಬ್ಬರ್ ಸ್ಟಾಂಪಿನಿಂದ *ಮಾಕ್ ಪೋಲ್ ಸ್ಲಿಪ್* ಎಂಬ ಮುದ್ರೆ ಒತ್ತಿ, 50 ಅಣಕು ಮತಗಳು + 7 ಆರಂಭದ ಸ್ಲಿಪ್ ಗಳನ್ನು ವಿಶೇಷ ಕಪ್ಪು ಲಕೋಟೆಯಲ್ಲಿ ಇಟ್ಟು, ಸೀಲು ಮಾಡಿ, ಲಕೋಟೆಯ ಮೇಲೆ ಪಿಆರ್ ಓ ಮತ್ತು ಪೋಲಿಂಗ್ ಅಭ್ಯರ್ಥಿ/ಏಜೆಂಟರು ಸಹಿ ಮಾಡಬೇಕು. *ಲಕೋಟೆಯ ಮೇಲೆ- ವಿವಿ ಪ್ಯಾಟ್ ಪೇಪರ್ ಸ್ಲಿಪ್ ಆಫ್ ಮಾಕ್ ಪೋಲ್ ಎಂದು ಬರೆದು, ಮತ ಕೇಂದ್ರದ ಸಂಖ್ಯೆ ಹೆಸರು, ವಿಧಾನ ಸಭಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರನ್ನು ಬರೆದು, ಲಕೋಟೆಯನ್ನು  ವಿಶೇಷವಾದ ಪ್ಲಾಸ್ಟಿಕ್ ಪೆಟ್ಟಿಗೆಯ ಒಳಗಿರಿಸಿ, ಅದನ್ನು ಪಿ ಆರ್ ಓ ಮತ್ತು ಪೋಲಿಂಗ್  ಏಜೆಂಟರು ಸಹಿ ಮಾಡಿದ, ಗುಲಾಬಿ ಬಣ್ಣದ ಕಾಗದದ ಸೀಲಿನೊಂದಿಗೆ ಮೊಹರು ಮಾಡಿ, ಪ್ಲಾಸ್ಟಿಕ್ ಪೆಟ್ಟಿಗೆಯ ಮೇಲೆ, ಮತಕೇಂದ್ರದ ಸಂಖ್ಯೆ, ಮತ್ತು ಹೆಸರು, ಎಸಿ ಯ ಸಂಖ್ಯೆ ಮತ್ತು ಹೆಸರು, ಮತದಾನದ ದಿನಾಂಕ ವಿವರವನ್ನು ಬರೆಯಬೇಕು. *ನಂತರ, ಅಣಕು ಮತದಾನ ಪ್ರಮಾಣಪತ್ರದಲ್ಲಿ ಎಲ್ಲ ವಿವರ ಬರೆದು,  ಸಹಿ ಮಾಡಬೇಕು. *ಆನಂತರ  ಸಿಯುನ, ವಿವಿ ಪ್ಯಾಟ್ ನ ಸ್ವಿಚ್ ಆಫ್ ಆಗಿರುವುದನ್ನು ಖಾತ್ರಿಪಡಿಸಿಕೊಂಡು, ಸಿಯು, ವಿವಿ ಪ್ಯಾಟ್ ನ ಡ್ರಾಪ್ ಬಾಕ್ಸ್ ಅನ್ನು ಸೀಲು ಮಾಡಬೇಕು.  *ಎಲ್ಲಾ ರೆಡಿಯಾದ  ಮೇಲೆ ವಿವಿ ಪ್ಯಾಟ್ ನ ಪೇಪರ್ ರೋಲ್ ನಾಬ್  ಅನ್ನು  ಮೊದಲು   ಆನ್  ಮಾಡಿ, * ಆನಂತರ ಸಿಯು ನ ಹಿಂಭಾಗದ ಸ್ವಿಚ್  ಆನ್ ಮಾಡಬೇಕು. ಮತದಾನವು ನಿಗದಿಪಡಿಸಿದಂತೆ 7 ಗಂಟೆಗೆ ಶುರು ಮಾಡಬೇಕು,,,,,*ಶುರು ಮಾಡುವ ಮೊದಲು ಪಿ ಆರ್ ಓ ಅಧಿಕಾರಿಯು ಘೋಷಣೆಯನ್ನು ಗಟ್ಟಿಯಾಗಿ ಓದಬೇಕು. ಎಂಬೆಲ್ಲಾ  ಚುನಾವಣಾ ಪ್ರಕ್ರಿಯೆಯ  ಪ್ರಾಯೋಗಿಕ ತರಬೇತಿಯನ್ನು ಎಂ ಆರ್ ಪಿ  ಕಾಡು  ನಾಯಿಗಳು ಚುನಾವಣಾ ಸಿಬ್ಬಂದಿ  ಕಾಡು ನಾಯಿಗಳಿಗೆ ಅರ್ಥವಾಗುವಂತೆ ಸೊಗಸಾಗಿ ಹೇಳಿದವು!  

ನಂತರ  ಮೊದಲನೇ  ಮತಗಟ್ಟೆ  ಅಧಿಕಾರಿಯು ಮತದಾರನ ಗುರುತನ್ನು ಸತ್ಯಾಪನೆ  ಮಾಡುತ್ತಾನೆ. ಎರಡನೇ ಮತಗಟ್ಟೆ ಅಧಿಕಾರಿಯು ಮತದಾರನ ಎಡಗೈನ  ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಿ, ಮತದಾರನ ದಾಖಲೆಗಳನ್ನು ಮತದಾರರ ರಿಜಿಸ್ಟರ್ ನಲ್ಲಿ (ನಮೂನೆ 17ಎ) ನಮೂದಿಸಿ, ಆ ರಿಜಿಸ್ಟರ್ ನಲ್ಲಿ ಮತದಾರನ ಸಹಿ/ ಹೆಬ್ಬಟ್ಟಿನ  ಗುರುತು ಪಡೆದುಕೊಂಡು, ಹಾಗೂ ಮತದಾರನಿಗೆ ಮತದಾನ ಚೀಟಿಯನ್ನು ಕೊಡಬೇಕು. ಮೂರನೇ ಮತಗಟ್ಟೆ ಅಧಿಕಾರಿಯು ಮತದಾನ ಚೀಟಿ ಪಡೆದು, ಅದರ ಆಧಾರದ ಮೇಲೆ ಅವನು ಮತದಾನ ಮಾಡಲು ಬ್ಯಾಲೆಟ್ ಬಟನ್ ಒತ್ತಿ, ಮತ ದಾಖಲಿಸಲು ವೋಟಿಂಗ್ ಕಂಪಾರ್ಟ್ ಮೆಂಟ್ ಗೆ ಕಳಿಸಬೇಕು. ಮತದಾರ ಓಟು ಮಾಡಿದ ಮೇಲೆ ಬೀಮ್ ಸೌಂಡ್ ಬರುವುದನ್ನು ಆಲಿಸುವ ಮೂಲಕ ಮತ ದಾಖಲಾಗಿರುವುದನ್ನು  ಖಾತ್ರಿ ಪಡಿಸಿ ಮುಂದಿನ ಮತದಾರನಿಗೆ ಬ್ಯಾಲೆಟ್ ಬಟನ್ ನೀಡುತ್ತಾನೆ . ಇಡೀ ಮತಗಟ್ಟೆಯ ಸಂಪೂರ್ಣ ಪರಿಶೀಲನೆ ಜವಾಬ್ದಾರಿಯನ್ನು ಪಿ ಆರ್ ಓ ಅವರು ಮಾಡುತ್ತಾರೆ. ಎಂದು ಚುನಾವಣೆ ಪ್ರಕ್ರಿಯೆಯ ಕಾರ್ಯ ಹಂಚಿಕೆಯನ್ನು  ಎಂ ಆರ್ ಪಿ  ಕಾಡುನಾಯಿಗಳು ವಿವರಿಸಿ ಹೇಳಿದವು! 

ಮುಂದಿನ ನಾಕು ದಿನದಲ್ಲಿ ಕಾಡಿನ ಪ್ರಾಣಿಗಳ ಚುನಾವಣೆಯು ಯಶಸ್ವಿಯಾಗಿ  ಮುಗಿದು ಮತ್ತೆರಡು ದಿನದಲ್ಲಿ ಫಲಿತಾಂಶ ಕೂಡ ಪ್ರಕಟವಾಯಿತು. ಕಾಡಿನ ನರಿಯು ಸಾಕಷ್ಟು  ಆಸೆ  ಆಮಿಷ,  ಸುಳ್ಳು ಆಶ್ವಾಸನೆ ತೋರಿ  ಕಾಡಿನ ಮತದಾರ ಪ್ರಾಣಿಗಳನ್ನು ಕೊಂಡು ಕೊಂಡಿತ್ತು!   ಮೋಸದಿಂದ  ಬಹುಮತವನ್ನು ಪಡೆದು ಕಾಡಿನ ರಾಜ ಪದವಿಯನ್ನು ಅಲಂಕರಿಸಿತ್ತು!  ನಂತರ ನಾಡಿನಿಂದ ಕದ್ದು ತಂದ ಚುನಾವಣಾ ಸಾಮಗ್ರಿಗಳನ್ನು  ಮೊದಲಿನ ಸ್ಥಳಕ್ಕೆ ಕೊಂಡೊಯ್ದು ಇರಿಸಿದವು!

ಮುಂದೆ, ಮೂರು ತಿಂಗಳು ಕೂಡ ಕಳೆದಿರಲಿಲ್ಲ,,,,! ಗುಹೆಯ ಬಳಿ ಸಿಂಹದ ದಂಡು ಮಲಗಿತ್ತು , ಅಲ್ಲಿಗೆ,  ನರಿ ರಾಜ, ತನ್ನ   ದಂಡಿನ ಜೊತೆ ಆಗಮಿಸಿತು. ಹಿರಿಯ ಸಿಂಹ ಏನೆಂದು ಕೇಳಲು,,, ನರಿ ರಾಜನು,  ಮೃಗರಾಜ! ರಾಜನಾಗುವುದೆಂದರೆ ಮಾತಾಡಿದಷ್ಟು  ಸುಲಭ ಅಲ್ಲ! ನನಗಿರುವ ಸಾಮರ್ಥ್ಯ ಹಾಗೂ ಪ್ರಕೃತಿದತ್ತ ಸ್ವಭಾವದಿಂದ  ರಾಜನಾಗಲು ದುರ್ಬಲ ಆಗಿದ್ದೇನೆ. ದಯಮಾಡಿ ಪ್ರಕೃತ್ತಿದತ್ತವಾಗಿ ನೀನು ಪಡೆದ  ಸಾಮರ್ಥ್ಯದಿಂದ  ನೀನು ಜನ್ಮಾರಭ್ಯ ರಾಜ ಲಕ್ಷಣಗಳನ್ವೇ  ಸದಾ ಪಡೆದಿರುವ ಕಾರಣ ನೀನು ಎಲ್ಲಾ ಸಮರ್ಥವಾಗಿ ನಿಭಾಯಿಸಬಲ್ಲೆ. ದಯಮಾಡಿ ಈ ರಾಜ ಪದವಿ ನೀನೇ ಒಪ್ಪಿಕೋ! ಹುಲಿ, ಆನೆ, ಚಿರತೆ ಅಂತಹ ಶಕ್ತಿಯುತ ಪ್ರಾಣಿಗಳೇ ನಿನ್ನ ಒಪ್ಪಿ, ಮೌನದಲ್ಲಿ ಇರುವಾಗ ಸಂಕುಚಿತ ಭಾವದ ನಾನು ಸಣ್ಣತನಗಳನ್ನು  ಮಾಡಿ ನಿನಗೆ ತೊಂದರೆ ಮಾಡಿದರೂ ಅದನ್ನು ನೀನು ಲೆಕ್ಕಿಸದೆ ರಾಜ ಗಾಂಭೀರ್ಯದಲ್ಲೇ  ಬಾಳಿದೆ. ಕಾಡಿನ ಎಲ್ಲಾ ಪ್ರಾಣಿಗಳು ರಾಜನಾದರೂ ನನಗೆ ಗೌರವಿಸದೆ ನಿನಗೆ ಹೆಚ್ಚಿನ ಮನ್ನಣೆ ನೀಡುತ್ತಿರುವುದನ್ನು ಕಂಡು ನಿನ್ನ ಹಿರಿದಾದ ರಾಜ ವ್ಯಕ್ತಿತ್ವದ ಹಿರಿಮೆ ನನಗೆ ಅರಿವಾಗಿ ಜ್ಞಾನೋದಯ ಆಗಿದೆ. ನಾವು ಪವಿತ್ರ ಸೇವೆ ಹಾಗೂ ಕಾಳಜಿ ಪರ ನಡೆಯಿಂದ ರಾಜ ಅಂತ ಅನ್ನಿಸಬಹುದು!   ರಾಜ ಪದವಿ ಯಾರೂ ಮಾಡುವುದಲ್ಲ! ಆಗುವುದು ಮಾತ್ರ!! ಸಣ್ಣತನಗಳಿಂದ ಯಾರೂ ರಾಜರಾಗಲಾರರು ಗುಣಧರ್ಮದ ಸೇವಾ ನಡೆಯಿಂದ ಮಾತ್ರ ರಾಜರಾಗುತ್ತಾರೆ. ನನ್ನ ಕ್ಷಮಿಸು ದಯಮಾಡಿ ಈ ರಾಜ ಪದವಿಯನ್ನು ನೀನೇ ಸ್ವೀಕರಿಸು! ಎಂದಿತು. 

ಆಗ ಅಲ್ಲಿಗೆ ಆಗಮಿಸಿದ ಕಾಡಿನ ಎಲ್ಲಾ ಪ್ರಾಣಿಗಳು ಕೂಡ “ಮೃಗರಾಜ- ಸಿಂಹನೇ,   ನರಿ ಹೇಳುವುದು, ಅಕ್ಷರಶಃ ಸತ್ಯ. ಸಮರ್ಥರು ಮಾತ್ರ ರಾಜನಾಗುವುದರಿಂದ ಕಾಡು ನಾಡು ಸುಭಿಕ್ಷವಾಗಿರುತ್ತದೆ! ಎಂದಿನಂತೆ ನೀನು ಈ ಕಾಡನ್ನು  ನೋಡಿಕೋ” ಎಂದು ವಿನಯದಿಂದ ನಮಸ್ಕರಿಸಿದವು!  ಮೃಗರಾಜನಾದ  ಹಿರಿಯ ಸಿಂಹವು ಸಮಚಿತ್ತದ ಗಂಭೀರತೆಯಿಂದ ಎಲ್ಲಾ ಪ್ರಾಣಿಗಳ ಕೋರಿಕೆ ನುಡಿಗಳನ್ನು ಆಲಿಸಿ, “ಮಹಾ ಪ್ರಾಣಿ ಬಂಧುಗಳೇ,  *ನರಿಯೇ  ಪದನಿಮಿತ್ತ  ರಾಜನಾಗಿರಲಿ!* ಆದರೆ ಅದು ಪ್ರತಿ ವಿಚಾರವನ್ನು ಕಾಡಿನ ಎಲ್ಲಾ  ಹಿರಿಯ ಪ್ರಾಣಿಗಳ    ಬಳಿ  ಚರ್ಚಿಸಿ, ಚಿಂತಿಸಿ ಉತ್ತಮ ಅನ್ನಿಸಬಹುದಾದ  ನಿರ್ಧಾರವನ್ನು ಮಾಡಿ ಕಾಡಿನ ಆಳ್ವಿಕೆ ಮಾಡಲಿ!  ಹುಲಿ ಚಿರತೆ ಆನೆಗಳು ಮಂತ್ರಿಗಳಾಗಲಿ! ನಾವು ಸಿಂಹಗಳು ಎಲ್ಲವನ್ನೂ ಪರಿಶೀಲನೆ ಮಾಡಿ,  ಕಾಡಿಗೆ  ಯಾವುದೇ ತೊಂದರೆ   ಬರದಂತೆ ಆಗಾಗ ಸಂದರ್ಭಾನುಸಾರ ಹಿತೋಪದೇಶ ನೀಡುತ್ತೇವೆ!  ನಾವು ಕಾಲಕ್ಕೆ ತಕ್ಕಂತೆ ಆರೋಗ್ಯಕರ ಬದಲಾವಣೆಯನ್ನು ಬಯಸಿ, ಸ್ವೀಕರಿಸಿ,    ಸಾಧಕ ಬಾಧಕ ಚಿಂತಿಸಿ, ಎಲ್ಲರೊಳಗೊಂದಾಗಿ ಬೆರೆತು, ಕಾಡಿನ ಪ್ರಗತಿ ಮಾಡೋಣ.  ಎಲ್ಲರಲ್ಲಿರುವ ಒಳಿತಿನಿಂದ ಕಾಡು ಹಸಿರಾಗಲಿ.” ಎಂದಿತು. ಮೃಗರಾಜ ಹಿರಿಯ ಸಿಂಹದ ಮಾತಿಗೆ ಎಲ್ಲಾ ಪ್ರಾಣಿಗಳೂ ಬಾಗಿ ನಮಿಸಿದವು! ಆಗ ನರಿರಾಜನು- ಪ್ರಾಣಿ ಬಾಂಧವರೇ, ಎಂತಹ ವಿಶಾಲವಾದ  ಔದಾರ್ಯದ ಮನಸ್ಸು , ನಮ್ಮ  ಹಿರಿಯ ಸಿಂಹ-   ಮೃಗರಾಜನದು!  ಉನ್ನತ ಸ್ಥಾನಮಾನದ ಕುರ್ಚಿಯಲ್ಲಿ  ಕುಳಿತ ಮಾತ್ರಕ್ಕೆ ಯಾರೂ ರಾಜನಾಗಲಾರರು! ಉನ್ನತ ಮನಸ್ಸನ್ನು ಹೊಂದಿದವರು   ಸೇವಾ ಮನೋಭಾವ ಹೊಂದಿದವರು, ನಿಸ್ವಾರ್ಥ ಗುಣದವರು, ಪ್ರಾಮಾಣಿಕರು  ಎಲ್ಲಿದ್ದರೂ  ಏನೂ ಭೌತಿಕ  ಸಿರಿ ಇಲ್ಲದಿದ್ದರೂ  ಅವರು ಮಹಾರಾಜರೇ!  ನನಗಿಂದು ಜ್ಞಾನೋದಯವಾಯಿತು! ನಾನು ಇನ್ಮುಂದೆ ಎಲ್ಲರಲ್ಲಿರುವ  ಒಳ್ಳೆಯತನ  ಕಲಿತು  ಒಳ್ಳೆಯವನಾಗಿ ಒಳ್ಳೆಯದನ್ನೇ ನಿಮ್ಮೆಲ್ಲರ ಜೊತೆ ಬೆರೆತು ಮಾಡುತ್ತೇನೆ, ಎಂದು  ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿತು. ಮುಂದೆ, ಕಾಡಿನ ಎಲ್ಲಾ ಪ್ರಾಣಿಗಳ ಹೊಂದಾಣಿಕೆ ಸಹಕಾರಯುತ  ಸಹಬಾಳ್ವೆಯ ನೀತಿಯಿಂದ, ಪವಿತ್ರವಾದ ರಾಜಕೀಯದಿಂದ ಪ್ರಾಣಿ ಸತ್ತಾತ್ಮಕ ಮೌಲ್ಯಗಳಿಂದ, ಪ್ರಾಣಿ ಪ್ರಭುತ್ವ ಸರ್ಕಾರದಿಂದ  “ಕಾಡು”  ಹಸಿರಾಯಿತು! 

*********************************************

ಲೇಖಕಿ: ಶ್ರೀಮತಿ// ಎ. ಸಿ. ಶಶಿಕಲಾ ಶಂಕರಮೂರ್ತಿ

(ನಮ್ರತಾ) ಶಿಕ್ಷಕಿ, ಸಾಹಿತಿ, ದಾವಣಗೆರೆ.