ಪ್ರಾಣವಾಯು, ಹಾಸಿಗೆಗೆ ಹೆಚ್ಚಿದ ಬೇಡಿಕೆ

ಬೆಂಗಳೂರು, ಏ.೨೩- ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದೆಲ್ಲೆಡೆ ಕೋವಿಡ್ ಎರಡನೇ ಅಲೆ ಹರಡಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇದರ ನಡುವೆ ದಿನಕ್ಕೆ ೫೦ ಸಾವಿರ ಹಾಸಿಗೆ ಮತ್ತು ೧,೬೦೦ ಟನ್ ಆಕ್ಸಿಜನ್ ಬೇಡಿಕೆ ಉಲ್ಬಣಗೊಂಡಿದೆ.
ರಾಜ್ಯ ಔಷಧ ನಿಯಂತ್ರಕ ಕಚೇರಿಯ ಮಾಹಿತಿ ಅನ್ವಯ, ಕರ್ನಾಟಕ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಒಳಗೊಂಡಂತೆ ೫೦ ಸಾವಿರ ಹಾಸಿಗೆ ಮತ್ತು ದಿನಕ್ಕೆ ೧,೬೪೩ ಟನ್ ಆಕ್ಸಿಜನ್ ಅಗತ್ಯವಿರುತ್ತದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಆಕ್ಸಿಜನ್ ಸಾಮರ್ಥ್ಯವನ್ನು ಹೆಚ್ಚಿದ್ದರೂ, ದಿನಕ್ಕೆ ಕೇವಲ ೮೧೨ ಟನ್ ಮಾತ್ರ ಉತ್ಪಾದನಾ ಆಗುತ್ತಿದ್ದು, ಈ ಪೈಕಿ ೬೦೦ ಟನ್ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಕಳೆದ ಹತ್ತು ದಿನಗಳ ಹಿಂದೆ ಕೇವಲ ೧೧.೫ರಷ್ಟು ಸಕ್ರಿಯ ಪ್ರಕರಣಗಳಿಗೆ ಮಾತ್ರ ಆಕ್ಸಿಜನ್ ಅಗತ್ಯವಿರುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಂದು ಕನಿಷ್ಠ ೨೦,೨೬೧ ಕೋವಿಡ್ -೧೯ ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದೆ.ಹಾಗಾಗಿ, ೬೦೦ ಟನ್‌ಗಳಿಗಿಂತ ಹೆಚ್ಚಿನ ಬೇಡಿಕೆ ಬಂದಿದೆ.
ಅಲ್ಲದೆ, ಈ ಸಂಖ್ಯೆಯು ಏರಿಳಿತವಾಗ ಬಹುದಾದರೂ, ಮತ್ತೊಂದೆಡೆ ನೂರಾರು ಕೋವಿಡ್ ರಹಿತ ರೋಗಿಗಳಿಗೂ ಆಕ್ಸಿಜನ್ ಅಗತ್ಯವಿದೆ ಎಂದು ಆಸ್ಪತ್ರೆಗಳು ಹೇಳಿವೆ.
ಅದೇ ರೀತಿ, ಆಕ್ಸಿಜನ್ ಉತ್ಪಾದಿಸುವ ಭೋರುಕಾ, ಪ್ರಾಕ್ಸೇರ್ ಇಂಡಿಯಾ, ಏರ್ ವಾಟರ್ಸ್ ಇಂಡಿಯಾ, ಬಳ್ಳಾರಿ ಆಕ್ಸಿಜನ್, ಯುನಿವರ್ಸಲ್ ಏರ್ ಪ್ರಾಡಕ್ಟ್ಸ್ ಮತ್ತು ಜತೆ ಎಸ್ ಡಬ್ಲ್ಯೂ ಒಟ್ಟಾರೆಯಾಗಿ ೫,೭೮೦ ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ ಎಂದು ದಾಖಲೆಗಳು ಹೇಳಿವೆ. ಆದರೆ, ೧ ಸಾವಿರ ಟನ್‌ಗಳಷ್ಟು ಶೇಖರಣಾ ಸಾಮರ್ಥ್ಯ ಹೊಂದಿರುವ ಎರಡು ಮೂರು ಆಕ್ಸಿಜನ್ ಕಾರ್ಖಾನೆಗಳು ಮಾತ್ರ ಈ ಉತ್ಪಾದನಾ ಕಾಯಕದಲ್ಲಿ ತೊಡಗಿವೆ.
ಈ ಕುರಿತು ಭೋರುಕಾ ಆಕ್ಸಿಜನ್ ಉತ್ಪಾದನಾ ವ್ಯವಸ್ಥಾಪಕ ಸುಬ್ರಮಣಿ ಗೋವಿಂದಸ್ವಾಮಿ ಪ್ರತಿಕ್ರಿಯಿಸಿ, ನಾವು ಶೇ ೧೨ ರಿಂದ ೧೫ರಷ್ಟು ಮಾತ್ರ ಆಕ್ಸಿಜನ್ ನಿರ್ಣಾಯಕ ಶೇಖರಣೆಯಾಗಿ ಇರಿಸಬಹುದು. ಆದರೆ, ಇದೀಗ, ನಾವು ದಿನದ ೨೪ ಗಂಟೆಯೂ ಕೆಲಸ ಮಾಡುತ್ತಿದ್ದೇವೆ.ನಾವು ಉತ್ಪಾದಿಸುವ ಎಲ್ಲವೂ ಹೊರ ಭಾಗಗಳಿಗೆ ಸರಬರಾಜು ಆಗುತ್ತಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಶನ್ (ಫಾನಾ) ಅಧ್ಯಕ್ಷ ಡಾ.ಎಚ್.ಎಂ.ಪ್ರಸನ್ನ, ಕಳೆದ ಕೆಲವು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿಲ್ಲ. ಇನ್ನು, ಆಕ್ಸಿಜನ್ ಪೂರೈಕೆದಾರರು ಕೇವಲ ಶೇ.೫೦ರಷ್ಟು ಬೇಡಿಕೆಯನ್ನು ಪೂರೈಸಲು ಸಮರ್ಥರಾಗಿದ್ದಾರೆ ಎಂದರು.
ಕಳೆದ ಕೆಲವು ದಿನಗಳಲ್ಲಿ ನಮಗೆ ದಿನಕ್ಕೆ ಕನಿಷ್ಠ ೨೦೦ ಟನ್ ಆಕ್ಸಿಜನ್ ಬೇಕಾಗಿತ್ತು.ಆದರೆ,ಈಗ ೨೪೦ ರಿಂದ ೩೦೦ ಟನ್‌ಗಳಿಗೆ ಏರಿದೆ. ಆದರೆ ಪೂರೈಕೆ ಕೂಡ ಸರಿಯಲ್ಲ.ಮತ್ತೊಂದೆಡೆ ಉತ್ಪಾದನೆಯಾಗುವ ಆಮ್ಲಜನಕವನ್ನು ಇತರ ರಾಜ್ಯಗಳಿಗೂ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.