ಪ್ರಾಣವಾಯು ಮಾಹಿತಿಗೆ ಸೇವಾ ಕೇಂದ್ರ ಆರಂಭ

ಬೆಂಗಳೂರು, ಏ.೧೯- ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-೧೯ ಸಂಬಂಧ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಿದೆ ಎಂಬ ವರದಿಗಳ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ, ಆಕ್ಸಿಜನ್ ಮಾಹಿತಿಗಾಗಿ ವಿಶೇಷ ಸೇವಾ ಕೊಠಡಿ ಆರಂಭಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಧಿಕಾರಿಯೊಬ್ಬರು, ನಗರದ ಔಷಧ ನಿಯಂತ್ರಕ ಕಚೇರಿಯಿಂದಲೇ ಈ ಕೊಠಡಿ ಆರಂಭಿಸಲಾಗಿದ್ದು, ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಆಕ್ಸಿಜನ್ ತೊಂದರೆ ಆಗದಂತೆ ನಿಗಾವಹಿಸಲಾಗಿದೆ ಎಂದರು.
ಇನ್ನು, ಪ್ರತಿನಿತ್ಯ ೮೧೨ ಟನ್‌ಗಳಷ್ಟು ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಲಾಗಿದ್ದು, ಈ ಕುರಿತು ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ, ಕೆಲವು ಆಸ್ಪತ್ರೆಗಳು ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಪೂರೈಕೆಯಲ್ಲಿ ಸಮಸ್ಯೆ ಬಂದಿದೆ ಎಂದು ಅವರು ಹೇಳಿದರು.
ಕಳೆದ ಎರಡು ದಿನಗಳ ಹಿಂದಷ್ಟೇ ೨೭೨ ಟನ್‌ಗಳಷ್ಟು ಆಕ್ಸಿಜನ್ ಪೂರೈಕೆಯಾಗಿದೆ. ಅದು ಬಿಟ್ಟರೆ ಸುಮಾರು ೨೦೦ ಟನ್‌ಗಳಷ್ಟು ಮಾತ್ರ ಬೇಡಿಕೆ ಬಂದಿದೆ ಎಂದ ಅವರು, ೪೨೦ ಟನ್‌ಗಳಷ್ಟು ಹೆಚ್ಚಿನ ಬೇಡಿಕೆ ಬಂದರೂ ನಾವು ಪೂರೈಕೆ ಮಾಡುತ್ತೇವೆ ಎಂದರು.
ರೆಮ್ಡೆಸಿವಿರ್:
ಇನ್ನು, ಕೋವಿಡ್ಗೆ ರೆಮ್ಡೆಸಿವಿರ್ ಪರಿಣಾಮಕಾರಿ ಔಷಧಿಯಾಗಿದ್ದು, ಈ ಔಷಧಿಯನ್ನು ರಾಜ್ಯದ ೩೩ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.
ಅಲ್ಲದೆ, ರಾಜ್ಯದ ಸುಮಾರು ೩೩ ಆಸ್ಪತ್ರೆಗಳು ರೆಮ್ಡೆಸಿವಿರ್ ಔಷಧ ಪೂರೈಕೆಗೆ ಬೇಡಿಕೆ ಇಟ್ಟಿದ್ದು, ಪ್ರತಿ ಆಸ್ಪತ್ರೆಗೆ ೧೦೦ ವೈಯಲ್ ಗಳಷ್ಟು ಔಷಧ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.