ಪ್ರಾಣವಾಯುವಿಗೆ ಪರದಾಟ: ಕೋಲಾರ ಆಸ್ಪತ್ರೆಯಲ್ಲಿ ನಾಲ್ವರ ಸಾವು

ಕೋಲಾರ, ಏ. ೨೬- ಕೊರೊನಾ ಸೋಂಕಿಗಾಗಿ ಕೋಲಾರ ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ.
ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಒಟ್ಟು ೧೫ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ ವೇಳೆ ಏಕಾಏಕಿ ರೋಗಿಗಳಿಗೆ ಪೂರೈಕೆ ಮಾಡುತ್ತಿದ್ದ ಆಕ್ಸಿಜನ್ ನಲ್ಲಿ ವ್ಯತ್ಯಯ ಉಂಟಾದ ಕಾರಣ, ನಾಲ್ವರು ಸೋಂಕಿತರು ಮೃತರಾಗಿದ್ದಾರೆ.
ಕೋಲಾರ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ನಡುವೆ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ಮಿತಿಮೀರಿರುವ ರೋಗಿಗಳನ್ನು ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಕ್ಸಿಜನ್ ಪೂರೈಕೆಯಲ್ಲಾದ ಕೊರತೆ ನಾಲ್ವರು ಸೋಂಕಿತರನ್ನು ಬಲಿ ಪಡೆದುಕೊಂಡಿದೆ.
ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಬೇಜವಾಬ್ದಾರಿಯೇ ನಾಲ್ವರು ಸೋಂಕಿತರ ಸಾವಿಗೆ ಕಾರಣವೆಂದು ಮೃತರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಏಕಾಏಕಿ ಆಮ್ಲಜನಕ ಪೂರೈಕೆ ಸ್ಥಗಿತಗೊಳಿಸಿರುವುದೇ ರೋಗಿಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಜಿಲ್ಲಾಸ್ಪತ್ರೆಗಳು ಸೇರಿದಂತೆ, ರಾಜಧಾನಿ ಬೆಂಗಳೂರು ಸರ್ಕಾರಿ ಆಸ್ಪತ್ರೆಗಳಲ್ಲೂ ಆಮ್ಲಜನಕ ಕೊರತೆಯುಂಟಾಗಿದ್ದು, ಆಕ್ಸಿಜನ್ ಕೊರತೆಯಿಂದಾಗಿ ರೋಗಿಗಳು ಮೃತಪಡುತ್ತಿರುವ ಘಟನೆಗಳು ದೇಶದಾದ್ಯಂತ ಹಲವು ಆಸ್ಪತ್ರೆಗಳಲ್ಲಿ ವರದಿಯಾಗುತ್ತಿರುವುದು ಆತಂಕಕಾರಿಯಾಗಿದೆ.
ನಿನ್ನೆ ದೆಹಲಿಯ ಆಸ್ಪತ್ರೆಗೆ ದಾಖಲಿಸಲು ಕಾರಿನಲ್ಲಿ ಆಕ್ಸಿಜನ್ ಪೂರೈಕೆಯೊಂದಿಗೆ ಕರೆದೊಯ್ಯುತ್ತಿದ್ದ ರೋಗಿಯೊಬ್ಬರು ಆಕ್ಸಿಜನ್ ಕೊರತೆಯುಂಟಾಗಿ ಕಾರಿನಲ್ಲೇ ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಆಕ್ಸಿಜನ್ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ, ಕಾಣದ ಕೈಗಳು ಬಹುದೊಡ್ಡ ಮಾಫಿಯಾ ನಡೆಸುತ್ತಿರುವುದಾಗಿ ಸರ್ಕಾರಕ್ಕೆ ಅನುಮಾನ ವ್ಯಕ್ತವಾಗಿದೆ.
ಆಕ್ಸಿಜನ್ ಪೂರೈಕೆ ಸಂಬಂಧ ಸೂಕ್ತ ಅಂಕಿಅಂಶಗಳನ್ನು, ದಾಖಲೆಗಳನ್ನು ನಿರ್ವಹಿಸದ ಔಷಧ ನಿಯಂತ್ರಣ ಅಧಿಕಾರಿಗಳ ಮೇಲೆ ಅನುಮಾನಪಡುವಂತಹ ಹೇಳಿಕೆಯನ್ನು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ನೀಡಿದ್ದಾರೆ. ಈ ನಡುವೆ ರೆಮ್‌ಡಿಸಿವಿರ್ ಔಷಧಿ ವಿತರಣೆಯಲ್ಲೂ ಕೃತಕ ಅಭಾವ ಸೃಷ್ಟಿಸುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಔಷಧ ನಿಯಂತ್ರಣಾಧಿಕಾರಿಗಳು
ಕಳೆದೆರಡು ದಿನಗಳ ಹಿಂದೆ ರಾಜ್ಯ ಔಷಧ ನಿಯಂತ್ರಣಾಧಿಕಾರಿಗಳು ನೀಡಿರುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ೫೧,೯೯೫ ಆಮ್ಲಜನಕಯುಕ್ತ ಹಾಸಿಗೆಗಳ ಲಭ್ಯತೆ ಇದೆ. ಪ್ರತಿದಿನ ಈ ಹಾಸಿಗೆಗಳಲ್ಲಿರುವ ರೋಗಿಗಳಿಗೆ ೧,೬೩೪. ೫ ಟನ್ ಆಮ್ಲಜನಕದ ಅವಶ್ಯಕತೆಯಿದೆ. ಆದರೆ ರಾಜ್ಯದಲ್ಲಿ ಸದ್ಯಕ್ಕೆ ೮೧೨ ಟನ್ ಆಕ್ಸಿಜನ್ ಮಾತ್ರ ಲಭ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ನೀಡಿರುವ ಅಂಕಿಅಂಶಗಳು ರಾಜ್ಯದಲ್ಲಿ ಆಮ್ಲಜನಕದ ಕೊರತೆಯನ್ನು ಸಾಬೀತುಪಡಿಸಿದೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಪೂರೈಕೆಯಾಗುತ್ತಿರುವ ಆಮ್ಲಜನಕ ಕುರಿತಂತೆ ಇದುವರೆಗೆ ಲೆಕ್ಕಾಚಾರ ದೊರೆಯದ ಹಿನ್ನೆಲೆ ಆಕ್ಸಿಜನ್ ಕೃತಕ ಅಭಾವ ಸೃಷ್ಟಿಸುತ್ತಿರುವ ಹಿಂದೆ ಕಾಳಸಂತೆ ಪ್ರಭಾವವಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಭುರುಕಾ ಗ್ಯಾಸಸ್ ಸಂಸ್ಥೆಯ ಎರಡು ಘಟಕಗಳು, ಏರ್ ವಾಟರ್ಸ್ ಇಂಡಿಯಾ, ಬಳ್ಳಾರಿ ಆಕ್ಸಿಜನ್, ಯೂನಿವರ್ ಸೆಲ್ ಪ್ರಾಡೆಕ್ಸ್, ಜಿಂದಾಲ್ ಸಂಸ್ಥೆಯ ಉತ್ಪಾದನಾ ಘಟಕಗಳು ದಿನನಿತ್ಯ ಸಾಮರ್ಥ್ಯದನ್ವಯ ಕರ್ತವ್ಯ ನಿರ್ವಹಿಸಿದರೆ, ೫,೭೮೦ ಟನ್ ಆಕ್ಸಿಜನ್ ಉತ್ಪಾದನೆ ಮಾಡಬಹುದಾಗಿದೆ. ಆದರೆ ಇಷ್ಟೊಂದು ಪ್ರಮಾಣದ ಆಕ್ಸಿಜನ್ ಉತ್ಪತ್ತಿಯಾಗದಿರುವುದು ಕೊರತೆಗೆ ಮತ್ತೊಂದು ಕಾರಣ ಎನ್ನಲಾಗಿದೆ.
ಖಾಸಗಿ ಸಂಸ್ಥೆಗಳ ಮೇಲೆ ಸರ್ಕಾರ ಆದೇಶ ನೀಡಲು ಸಾಧ್ಯವಾಗದಿರುವುದೇ ಮತ್ತೊಂದು ಕಾರಣ ಎನ್ನಲಾಗಿದೆ. ಸದ್ಯದ ಪರಿಸ್ಥಿತಿ ಅನ್ವಯ ಪ್ರತಿದಿನ ೯೦೦ ರಿಂದ ೯೪೦ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಕೇಂದ್ರದಿಂದಲೂ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಆಕ್ಸಿಜನ್ ಬೇಡಿಕೆ ಹೆಚ್ಚಾದ ನಂತರ, ಕೈಗಾರಿಕೆಗಳಿಂದ ಪೂರೈಕೆ ಆಗುತ್ತಿರುವ ಔಷಧ ನಿಯಂತ್ರಕರು, ಪೊಲೀಸ್ ಸುಪರ್ದಿನಲ್ಲಿಯೇ ವಿಲೇವಾರಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೂ ಸಹ ಮಧ್ಯವರ್ತಿಗಳು ಆಕ್ಸಿಜನ್ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.

ಆಕ್ಸಿಜನ್ ಪೂರೈಕೆ ಸ್ಥಗಿತ

ತುರ್ತು ಚಿಕಿತ್ಸಾ ಘಟಕದ ನಾಲ್ವರು ರೋಗಿಗಳು ಸಾವು.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಘಟನೆ.

ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ, ಆರೋಪ .

ಮಾಫಿಯಾಗಳಿಂದ ಆಕ್ಸಿಜನ್ ಕೃತಕ ಅಭಾವ ಸೃಷ್ಟಿ.

ರಾಜ್ಯದಲ್ಲಿ ಒಟ್ಟು ೫೧,೯೯೧ ಆಮ್ಲಜನಕಯುಕ್ತ ಹಾಸಿಗೆಗಳು.

ಅವಶ್ಯಕ ಆಮ್ಲಜನಕ ಪ್ರಮಾಣ, ೧,೬೩೪.೫ ಟನ್.

ರಾಜ್ಯದಲ್ಲಿ ಪ್ರತಿನಿತ್ಯ ೮೧೨ ರಿಂದ ೯೦೦ ಟನ್ ಆಮ್ಲಜನಕ ಉತ್ಪಾದನೆ.

:=@