ಪ್ರಾಣಪ್ರತಿಷ್ಠೆ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ

ಬೆಂಗಳೂರು,ಜ.೧೯-ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಇದೇ.ಜ.೨೨ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನಗರದವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳು,ಪಟ್ಟಣಗಳ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳು, ದೇವಾಲಯಗಳೂ ಸೇರಿದಂತೆ ಪ್ರಾರ್ಥನಾ ಮಂದಿರಗಳ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆಯಿಂದಾಗಿ ಜ.೨೨ರಂದು ಯಾವುದೇ ಪೊಲೀಸ್ ಸಿಬ್ಬಂದಿಗೆ ರಜೆ ನೀಡದಂತೆ ಸೂಚಿಸಲಾಗಿದೆ.
ಒಂದು ವೇಳೆ ರಜೆಯಲ್ಲಿರುವವರು ಕೂಡ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂದು ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಹಿಂದಿನ ಕೋಮುಗಲಭೆಗಳ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಅಂತಹ ಗಲಭೆಗಳಲ್ಲಿ ಭಾಗಿಯಾಗಿದ್ದವರ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಜೊತೆಗೆ ಆಯಾ ಪೊಲೀಸ್ ಠಾಣೆಗಳ ರೌಡಿಶೀಟರ್‌ಗಳು ಹಳೆಯ ಆರೋಪಿಗಳು,ಸಮಾಜದ ಸ್ವಾಥ್ಯ ಕದಡುವ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ.
ಅಲ್ಲದೇ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳು ಎಲ್ಲಾ ಧರ್ಮಗಳ ಮುಖಂಡರನ್ನು ಕರೆಸಿ ಶಾಂತಿಪಾಲನಾ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಮ್ಮ ಸಮುದಾಯದ ಮುಖಂಡರಿಗೆ ಸಲಹೆ ನೀಡಿ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ಬಗ್ಗೆ ಮಾಹಿತಿ ನೀಡಲು ತಿಳಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆಯನ್ನು ತಿಳಿಸಿದ್ದಾರೆ.
ಜ.೨೨ರಂದು ರಾಜ್ಯದಲ್ಲಿ ಯಾವುದೇ ಧಾರ್ಮಿಕ ರ್‍ಯಾಲಿಗಳು,ಸಾವಿರಾರು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಲು ಅವಕಾಶ ನೀಡದೇ ಜನಸಂದಣಿಯ ಪ್ರದೇಶದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಸೂಚಿಸಲಾಗಿದೆ.
ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವರ ಮೇಲೆ ಹೆಚ್ಚಿನ ಎಚ್ಚರಿಕೆ ಸಲಹೆ ನೀಡಿ ಅಗತ್ಯವಿದ್ದರೆ ವಿವಿಧ ಜಿಲ್ಲೆಗಳಿಂದಲೂ ಪೊಲೀಸರನ್ನು ಕರೆಸಿಕೊಳ್ಳಲು ಸಲಹೆ ನೀಡಲಾಗಿದೆ.
ಮಂಡ್ಯ ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳು ಕೋಮು ಭಾವನೆ ಕದಡುವ ಪ್ರದೇಶಗಳು,ಕರಾವಳಿ ಭಾಗಗಳಲ್ಲೂ ಹೆಚ್ಚವರಿ ಪೊಲೀಸರ ನಿಯೋಜನೆ ಮಾಡಿ ಅಭೂತ ಪೂರ್ವ ಬಂದೋಬಸ್ಥ್ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾರೆ.

ಅಯೋಧ್ಯೆಗೆ ಭಕ್ತ ಸಾಗರ
ರಾಮನೂರಿನಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಪನಾ ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇದೆ. ದೇಶದ ವಿವಿಧ ಭಾಗಗಳಿಂದ ರಾಮಭಕ್ತರ ದಂಡು ಅಯೋಧ್ಯೆಗೆ ಆಗಮಿಸುತ್ತಿದ್ದು, ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. ಎಲ್ಲರ ಬಾಯಲ್ಲೂ ಜೈಶ್ರೀರಾಮ್ ಘೋಷಣೆ ಅನುರಣಿಸುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮಾಗಮವಾಗಲಿದೆ.
ಇದೇ ವೇಳೆ ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಆಹ್ವಾನ ಸಿಕ್ಕಿದೆ. ಇದಕ್ಕಾಗಿ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಾಣಪ್ರತಿಷ್ಠಾ ಮೂರ್ತಿಯನ್ನು ಮೈಸೂರಿನ ಅರುಣ್‌ಯೋಗಿರಾಜ್ ಕೆತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಾಧಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ ಬಂದಾನೋ ಎಂಬ ಹಿಂದಿ ಗೀತೆಯನ್ನು ಜಯಶ್ರೀ ಅರವಿಂದ್ ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಈ ಹಾಡನ್ನು ಬಿಡುಗಡೆ ಮಾಡಿದರು.