ಪ್ರಾಚೀನ ನಾಣ್ಯಗಳ ಕಳವು: ನಾಲ್ವರ ಸೆರೆ

ಜರ್ಮನಿ, ಜು.೨೦- ಕಳೆದ ನವೆಂಬರ್‌ನಲ್ಲಿ ಪ್ರಾಚೀನ ಕಾಲಕ್ಕೆ ಸೇರಿದ್ದ ಬರೊಬ್ಬರಿ ೧.೫ ಮಿಲಿಯನ್ ಪೌಂಡ್ ಮೌಲ್ಯದ ಚಿನ್ನದ ನಾಣ್ಯಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬವೇರಿಯಾದ ಮಂಚಿಂಗ್‌ನಲ್ಲಿರುವ ವಸ್ತುಸಂಗ್ರಹಾಲಯದಿಂದ ನೂರಾರು ನಾಣ್ಯಗಳನ್ನು ಕಳವು ನಡೆಸಲಾಗಿದ್ದು, ಈ ಎಲ್ಲಾ ಚಿನ್ನದ ನಾಣ್ಯಗಳು ಕ್ರಿಸ್ತಪೂರ್ವ ಒಂದನೇ ಶತಮಾನಕ್ಕೆ ಸೇರಿದ್ದಾಗಿವೆ. ಜರ್ಮನಿಯ ಉತ್ತರ ರಾಜ್ಯವಾದ ಮೆಕ್ಲೆನ್‌ಬರ್ಗ್-ವೆಸ್ಟರ್ನ್ ಪೊಮೆರೇನಿಯಾದಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ವೃತ್ತಿಪರ ಕಳ್ಳರಾಗಿದ್ದಾರೆ ಎಂದು ಬವೇರಿಯಾದ ಆಂತರಿಕ ಸಚಿವ ಜೋಕಿಮ್ ಹೆರ್ಮನ್ ಹೇಳಿದ್ದಾರೆ. ಇನ್ನು ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದಲ್ಲಿ ಹೆಚ್ಚಿನ ಸಾಕ್ಷ್ಯಾಧಾರಗಳು ಲಭ್ಯವಾಗಿದ್ದು, ತನಿಖಾ ಕಾರ್ಯ ಮುಂದುವರೆದಿದೆ ಎಂದು ಹೇಳಲಾಗಿದೆ. ೧೯೯೯ರಲ್ಲಿ ಪುರಾತತ್ತ್ವ ಶಾಸ್ತ್ರದ ಅಗೆಯುವಿಕೆಯ ಸಮಯದಲ್ಲಿ ಮಂಚಿಂಗ್ ಬಳಿ ಈ ಬಂಗಾರದ ನಾಣ್ಯಗಳನ್ನು ಪತ್ತೆಹಚ್ಚಲಾಗಿತ್ತು. ಈ ಮೂಲಕ ಇದನ್ನು ೨೦ ನೇ ಶತಮಾನದಲ್ಲಿ ಸೆಲ್ಟಿಕ್ ಚಿನ್ನದ ಅತಿದೊಡ್ಡ ಆವಿಷ್ಕಾರ ಎಂದು ಪರಿಗಣಿಸಲಾಗಿತ್ತು. ಬಳಿಕ ೨೦೦೬ ರಿಂದ ಈ ನಾಣ್ಯಗಳನ್ನು ಪ್ರದರ್ಶಿಸಲಾಗಿತ್ತು. ಇನ್ನು ಕಳವು ಸಮಯದಲ್ಲಿ ಆರೋಪಿಗಳು ಮ್ಯೂಸಿಯಂನ ಎಚ್ಚರಿಕೆಯ ವ್ಯವಸ್ಥೆಯನ್ನೇ ಹಾಳುಮಾಡಿ, ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.