ಪ್ರಾಚೀನ ಜಾನಪದ ಆಚರಣೆಗಳನ್ನು ಶಾಸನಗಳಲ್ಲಿ ಕಾಣಲು ಸಾಧ್ಯ:ಟಿ.ಹೆಚ್.ಎಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: ಪ್ರಾಚೀನ ಕಾಲದಲ್ಲಿನ ಜಾನಪದ ಆಚರಣೆಗಳನ್ನು, ಜಾನಪದ ಹಬ್ಬಗಳನ್ನು, ಕ್ರೀಡೆಗಳನ್ನು, ನೃತ್ಯಗಳನ್ನು, ಜಾನಪದ ನಾಟಕಗಳನ್ನು ಒಟ್ಟಾರೆ ಜಾನಪದಗಳನ್ನು ಬಿಂಬಿಸುವ ಸಂಸ್ಕೃತಿಯನ್ನು ನಾವು ಸಾವಿರಾರು ವರ್ಷಗಳ ಹಿಂದೆಯೇ ಶಾಸನಗಳಲ್ಲಿ ಕಾಣುತ್ತೇವೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ತಿಳಿಸಿದರು.
ಇಲ್ಲಿನ ಪಾರ್ವತಿನಗರದ ಅನಾಧಿಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾತಂಡದವರು ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಯುಗಾದಿ ಜಾನಪದ ಸಂಜೆಯನ್ನು ಉದ್ಘಾಟಿಸಿ ಮಾತನಾಡಿ, ಸಾವಿಲ್ಲದ ಸಾಂಸ್ಕೃತಿಕ ಪಳೆಯುಳಿಕೆಯೇ ಜಾನಪದ ಜಿಲ್ಲೆಯಲ್ಲಿ ಎಲ್ಲಾ ಪ್ರಕಾರದ ಜಾನಪದ ಕಲೆಗಳು ಇವೆ. ಸಮಾರಂಭದ ವೆಚ್ಚಗಳು ತುಂಬಾ ಜಾಸ್ತಿಯಾಗಿವೆ. ಬರೀ ಸರ್ಕಾರದ ಮೇಲೆ ಅವಲಂಬಿಸಿದರೆ ಸಾಧ್ಯವಿಲ್ಲ ಎಷ್ಟೋ ಸಾರಿ ಕಲಾವಿದರು ಕೈಯಿಂದ ಹಾಕಿ ತಮ್ಮ ಕಲೆಗಳನ್ನು ಪ್ರದರ್ಶಿಸಿದರು ಸಹ ಅವರಿಗೆ ಸರ್ಕಾರದಿಂದ ಬರುವ ಹಣ 2-3 ವರ್ಷಗಳು ಹಿಡಿಯುತ್ತವೆ. ಈಗಾಗಿ ಕಲಾವಿದರ ಜೀವನ ಬಹಳ ದುಸ್ಥರವಾಗಿದೆ ಎಂದರು.
ಉಪನ್ಯಾಸ ನೀಡಿದ ಎ.ಎಂ.ಪಿ. ವಿರೇಶ್ ಸ್ವಾಮಿ ಹಳ್ಳಿಗಳಲ್ಲಿ ಮಳೆ ಬರದಿದ್ದರೆ, ಮಕ್ಕಳಾಗದಿದ್ದರೆ, ಮದುವೆಯಾಗದಿದ್ದರೆ, ರೋಗ ರುಜ್ಜಿನಿಗಳಿದ್ದಾರೆ, ಜಾನಪದ ಆಚರಣೆ ಮೊರೆಹೋಗಿ ನಿವಾರಿಸಿಕೊಳ್ಳುತ್ತಿದ್ದರು. ಜಾನಪದ ಕಲೆ ಜೀವನದ ಒಂದು ಅವಿಭಾಜ್ಜ ಅಂಗ ಅವು ನಮಗೆ ಮನೋರಂಜನೆ ಕೊಡುವುದಲ್ಲದೆ ನಮ್ಮ ಜೀವನವನ್ನು ಹಸನಾಗಿ ಮಾಡುತ್ತದೆ. ಸುಗ್ಗಿಹಾಡು, ಲಂಬಾಣಿ ನೃತ್ಯ, ಸೋಭಾನ ಪದಗಳು, ಗೀಗಿ ಪದಗಳು, ಮುಂತಾದ ಆಚರಣೆಗಳು ಬಿಡುವಿನ ಸಮಯದಲ್ಲಿ ರೈತರಿಗೆ ಸಂತೋಷವನ್ನು ಉಂಟು ಮಾಡುತ್ತದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಉಪನ್ಯಾಷಕ ದಸ್ತಗಿರಿಸಾಬ್ ಇಂತಹ ಪ್ರದರ್ಶನಗಳನ್ನು ನಮ್ಮ ಕಾಲೇಜುಗಳಲ್ಲಿ ಮಾಡಿದರೆ ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನ ಮತ್ತು ಹೊರಗಿನ ಪ್ರಪಂಚವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ ಯವರು ಇತ್ತೀಚಿಗೆ ಧನ ಸಹಾಯಕ್ಕಾಗಿ ನಾವು ಸರ್ಕಾರಿ ಕಛೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ ಎಷ್ಟೊ ಕಲಾವಿದರು ತಮ್ಮ ಪ್ರದರ್ಶನಗಳನ್ನು ಮಾಡುವುದೇ ಬಿಟ್ಟುಬಿಟ್ಟಿದ್ದಾರೆ. ಕಾರಣ ಕಲಾವಿದರಿಗೆ ಸರ್ಕಾರದವರು ಇನ್ನು ಮುಂದಾದರು ಯಾವ ಅಡಚಣೆ ಇಲ್ಲದೇ ಧನ ಸಹಾಯ ಮಾಡಬೇಕೆಂದು ವಿನಂತಿಸಿದರು. ಆರಂಭದಲ್ಲಿ ಪಂಡಿತ್ ದೊಡ್ಡ ಬಸವ ಗವಾಯಿಗಳಿಂದ ವಚನಾ ಗಾಯನ ನಡೆಯಿತು. ನಂತರ ವೈ.ಉಮೇಶ್ ಮತ್ತು ತಂಡದವರಿಂದ ಕ್ಷಯ ರೋಗದ ಬಗ್ಗೆ ಮನಮುಟ್ಟುವಂತೆ ತೊಗಲುಗೊಂಬೆ ಪ್ರದರ್ಶನ ನೀಡಿದರು. 
ನಿರೂಪಕ ವಿನೋದ್ ಎಂ.ಚೌವ್ವಾಣ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾತಂಡದ ಅಧ್ಯಕ್ಷ ಕೆ.ಹೊನ್ನೂರಸ್ವಾಮಿಯವರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.  ರಮಣಪ್ಪ ಭಜಂತ್ರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಕಲಾಪ್ರಮೀಗಳು ಉಪಸ್ಥಿತರಿದ್ದರು.