ಪ್ರಾಚಾರ್ಯರ ಹಾಗೂ ಉಪನ್ಯಾಸಕರ ನಡುವಿನ ಹೊಂದಾಣಿಕೆ ಬಹಳ ಮುಖ್ಯ: ಶಿವಶರಣಪ್ಪ ಮೂಳೆಗಾಂವ

ಕಲಬುರಗಿ:ಜ.6: ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಉನ್ನತ ಮಟ್ಟದ ಶಿಕ್ಷಣ ಪಡೆದು ಹೆಚ್ಚಿನ ಅಂಕ ಗಳಿಸುವ ಮೂಲಕ ಪ್ರಶಸ್ತಿ ಭಾಜನರಾಗಿ ತಮ್ಮ ಪಾಲಕರು ಹಾಗೂ ಓದಿದ ಶಾಲಾ, ಕಾಲೇಜಿನ ಕೀರ್ತಿ ಹೆಚ್ಚಿಸಲು ಮುಂದಾಗಬೇಕು ಎಂದು ಕಲಬುರಗಿ ಜಿಲ್ಲೆಯ ಪದವಿ ಪೂರ್ವ ಕಾಲೇಜು ಇಲಾಖೆಯ ಉಪನಿರ್ದೆಶಕರಾದ ಶಿವಶರಣಪ್ಪ ಮೂಳೆಗಾಂವ್ ಹೇಳಿದರು.

ನಗರದ ನೂತನ ವಿದ್ಯಾಲಯ ಸಭಾಂಗಣದಲ್ಲಿ ಕಲಬುರಗಿ ಜಿಲ್ಲಾ ಪದವಿ ಪೂರ್ವ ಪ್ರಾಚಾರ್ಯರ ಸಂಘದ ವತಿಯಿಂದ ಹಮ್ಮಿಕೊಂಡ ಮಾತೋಶ್ರಿ ಸಾವಿತ್ರಬಾಯಿ ಫುಲೆ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಹಾಗೂ ಬಡ್ತಿ ಹೊಂದಿದ ಪ್ರಚಾರ್ಯರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಪ್ರಚಾರ್ಯರು, ಉಪನ್ಯಾಸಕರ ನಡುವೆ ಹೊಂದಾಣಿಕೆ ಇದ್ದಾಗ್ ಓದುವಂತ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರಶಸ್ತಿ ವಿಜೇತರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಮೂಳೆಗಾಂಗ್ ತಿಳಿಸಿದರು.

ದೇಶದ ಏಕೈಕ ಮೊದಲ ಶಿಕ್ಷಕಿ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಹಗಲಿರುಳು ಕಷ್ಟ ಪಟ್ಟು ಹಲವಾರು ಅವಮಾನ, ಅಪಮಾನ ಎದುರಿಸಿ ನಮ್ಮೆಲ್ಲರ ಮನಸ್ಸಲ್ಲಿ ಶಿಕ್ಷಣದ ಭೀಜ ಬಿತ್ತಿದ ಮಾತೋಶ್ರಿ ಸಾವಿತ್ರಿಬಾಯಿ ಫುಲೆ ಅವರು ಎಂದು ಡಾ. ಚಿ. ಸಿ. ನಿಂಗಣ್ಣ ಅವರು ತಿಳಿಸಿದರು.

ಒಂದು ಕಾರ್ಯಕ್ರಮ ಮಾಡಲು ಒಬ್ಬ, ಇಬ್ಬರಿಂದ ಸಾದ್ಯವಿಲ್ಲ. ಸಂಘದ ಪದಾಧಿಕಾರಿಗಳು ಸ್ವಯಂ ಇಚ್ಛೆಯಿಂದ ಭಾಗಿಯಾಗಿ ಸಂಘದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು ಎಂದು ಕಲಬುರಗಿ ಜಿಲ್ಲಾ ಪದವಿ ಪೂರ್ವ ಕಾಲೇಜಿನ ಜಿಲ್ಲಾ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಸಂಘದ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ 2019-20ನೇ ಸಾಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಹಾಗೂ ನಗದು ಬಹುಮಾನ ಹಾಗೂ ಬಡ್ತಿ, ನಿವೃತ್ತಿ ಹೊಂದಿದ ಉಪನ್ಯಾಸರಿಗೂ ಸನ್ಮಾನ ಮಾಡಿ
ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಪ್ರಹ್ಲಾದ ಬುರ್ಲಿ, ಡಾ.ಸುಜಾತಾ, ಆಶಾ ನಸೀಮಾ, ಶಿವಾಜಿ ಪಾಟೀಲ ಸೇರಿದಂತೆ ಅನೇಕ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸೇರಿದಂತೆ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು, ಪಾಲಕರು ಇದ್ದರು. ನಿರೂಪಣೆ ಬಸವರಾಜ ಬಿರಾದಾರ, ಸ್ವಾಗತ ಅಲ್ಲಾವುದ್ದೀನ್ ಸಾಗರ್ ನೆರವೇರಿಸಿದರು.