
ಬೆಂಗಳೂರು, ಸೆ.4- ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿನ ಮೆಟಲ್ ವಿಷಯವಾಗಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ವೇಳೆ ಒಬ್ಬನಿಗೆ ಚಾಕು ಇರಿದ ಘಟನೆ ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗಾಯಾಳು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಅಬ್ಬಿಗೆರೆಯ ಅಶೋಕ್ ಐಟಿಐ ಕಾಲೇಜು ಬಳಿ ಪ್ರಾಕ್ಟಿಕಲ್ ಕ್ಲಾಸ್‌ನಲ್ಲಿ ಮೆಟಲ್ ವಿಷಯವಾಗಿ ಕಳೆದ ಆ. 28 ರಂದು
ಗಲಾಟೆ ನಡೆದಿದೆ. ನಂತರ ಕಾಲೇಜಿನಿಂದ ಹೊರಬರುತ್ತಿದ್ದಂತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ವಿದ್ಯಾರ್ಥಿ ಪಾಸಿ ಮೊಹಮ್ಮದ್ (21) ಎಂಬಾತನಿಗೆ ವಿದ್ಯಾರ್ಥಿ ಬಾಲಕೃಷ್ಣಾರೆಡ್ಡಿ (21) ಸೇರಿದಂತೆ ಇಬ್ಬರು ಚಾಕುವಿನಿಂದ ಇರಿದಿದ್ದಾರೆ.
ಕೂಡಲೇ ಗಾಯಾಳು ವಿದ್ಯಾರ್ಥಿ ಪಾಸಿ ಮೊಹಮ್ಮದ್ನನ್ನು ರಾಜಲಕ್ಷ್ಮಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಲಾಟೆ ಸಂಬಂಧ ಇಬ್ಬರನ್ನು ಗಂಗಮ್ಮಗುಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.