ಪ್ರಾಕೃತಿಕ ವಿಕೋಪ ತಡೆಯುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ

ಪುತ್ತೂರು, ಜೂ.೧- ಪ್ರಾಕೃತಿಕ ವಿಕೋಪವು ಹೇಳಿ ಕೇಳಿ ಬರುವುದಿಲ್ಲ. ಈ ಕುರಿತು ಎಲ್ಲಾ ಇಲಾಖೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಎಚ್ಚರಿಸಿದರು.
ಪ್ರಾಕೃತಿಕ ವಿಕೋಪ ಪೂರ್ವತಯಾರಿ ಕುರಿತು ಪುತ್ತೂರಿನ ತಾಪಂ ಸಭಾಂಗಣದಲ್ಲಿ ಅವರು ಸೋಮವಾರ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳ ಸಭೆ ನಡೆಸಿದರು.
ಮಳೆಗಾಲದಲ್ಲಿ ಯಾವುದೇ ಹಾನಿ ಸಂಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ಕೊರೊನಾ ಕಾರ್ಯಪಡೆಗಳನ್ನು ಮಳೆಹಾನಿ ತಡೆಯುವ ಕಾರ್ಯದಲ್ಲಿಯೂ ಬಳಸಿಕೊಳ್ಳಬೇಕು. ಅಪಾಯಕಾರಿ ಮರಗಳ ತೆರವು ಮತ್ತು ನದಿ ದಡದಲ್ಲಿ ನಿವಾಸಿಗಳಿಗೆ ಎಚ್ಚರ ಮೂಡಿಸುವ ಕೆಲಸ ನಡೆಯಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಮಯಕ್ಕೆ ಸರಿಯಾರಿ ಪೂರೈಕೆ ಮಾಡಬೇಕು. ಇಲಾಖೆಗಳು ಪರಸ್ಪರ ಹೊಂದಾಣಿಕೆಯೊಂದಿಗೆ ಕಾರ್ಯ ಚಟುವಟಿಕೆ ನಡೆಸಬೇಕು ಎಂದು ಅವರು ತಿಳಿಸಿದರು.
ಕಂದಾಯ ಇಲಾಖೆಯ ವತಿಯಿಂದ ಈ ಬಾರಿ ಪ್ರಾಕೃತಿಕ ವಿಕೋಪಕ್ಕೆ ಮಂಜೂರಾದ ಅನುದಾನದಲ್ಲಿ ಭಾಗಶಃ ಮನೆ ಹಾನಿಗೆ ೧೨ ಮನೆಗಳಿಗೆ ರೂ. ೧.೪೨ ಲಕ್ಷ, ತೋಟ ಹಾನಿ ೪ ಹೆಕ್ಟೇರ್‌ಗೆ ರೂ. ೧೭,೪೦೦ ಮತ್ತು ಕೋವಿಡ್‌ಗೆ ರೂ. ೧.೩೯ ಲಕ್ಷ ವಿನಿಯೋಗಿಸಲಾಗಿದೆ. ರೂ. ೨೪ ಲಕ್ಷ ಉಳಿಕೆಯಿದೆ ಎಂದು ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದರು.
ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ ಎ.೧ರಿಂದ ಈತನಕ ಮಳೆ ಗಾಳಿಯಿಂದಾಗಿ ಒಟ್ಟು ೧೨೦ ಕಂಬಗಳು ಹಾಗೂ ೨೦ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
೧೦೭೧ ಕೊರೊನಾ-೧೪ ಡೆಂಗ್ಯೂ ಪ್ರಕರಣ
ಕೋವಿಡ್, ಡೆಂಗ್ಯೂ ಮಲೇರಿಯಾದ ಕುರಿತು ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ತಾಲೂಕಿನಲ್ಲಿ ೧೦೭೧ ಕೊರೊನಾ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ೩೭ ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ, ೫ ಮಂದಿ ಉಪ್ಪಿನಂಗಡಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಗೂ ೨೬೩ ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ. ಅವಿಭಜಿತ ತಾಲೂಕಿನಲ್ಲಿ ೧೪ ಡೆಂಗ್ಯೂ ಪ್ರಕರಣ ವರದಿಯಾಗಿದ್ದು, ೨ ಮಲೇರಿಯಾ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಮಾಹಿತಿ ನೀಡಿ, ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ. ಚೆಲ್ಯಡ್ಕ ಮುಳುಗು ಸೇತುವೆಯು ತೀರಾ ನಾದುರಸ್ತಿಯಲಿದ್ದು, ಈ ಸೇತುವೆ ಇಲಾಖೆಯ ವಶಕ್ಕೆ ಪಡೆದುಕೊಂಡು ಬಳಿಕ ನೂತನ ಸೇತುವೆ ನಿರ್ಮಾಣದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.ಕುಕ್ಕುಪುಣಿ ಎಂಬಲ್ಲಿ ಅಪಾಯಕಾರಿ ಸೇತುವೆ ದುರಸ್ತಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗ್ರಾಮಬಂಧು ಯೋಜನೆಯಡಿ ೨೪ ಸೇತುವೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಅಡಿಕೆ ಕೊಳೆರೋಗದ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆಯ ನಿರ್ದೇಶಕಿ ರೇಖಾ, ತಾಲೂಕಿನಲ್ಲಿ ೨೫ ಸಾವಿರ ಹೆಕ್ಟೇರ್ ಅಡಿಕೆ ಬೆಳೆಯಲಾಗುತ್ತಿದೆ. ರೈತರಿಗೆ ಅಡಿಕೆ, ಕಾಳುಮೆಣಸು ಇನ್ನಿತರ ಸಸಿಗಳನ್ನು ನೀಡಲಾಗುತ್ತಿದೆ. ಬೆಳೆಗಳಿಗೆ ಸಿಂಪಡಿಸುವ ಕೋಪರ್ ಸಲ್ಫೇಟ್ ಇಲಾಖೆಯಿಂದ ನೀಡಲಾಗುತ್ತಿಲ್ಲ. ಆದರೆ ರೈತರು ಖರೀದಿಸಿ ಅದರ ಬಿಲ್ಲು ನೀಡಿದಲ್ಲಿ ಅವರಿಗೆ ಸಬ್ಸಿಡಿ ನೀಡಲಾಗುತ್ತದೆ ಎಂದು ತಿಳಿಸಿದರು.