ಪ್ರಸ್ತುತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾಗಿದೆ:ಪತ್ರಕರ್ತ ಅಮೀನ್ ಮಟ್ಟು

ಕಲಬುರಗಿ.ಜು.12: ಪ್ರಸಕ್ತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬೆದರಿಕೆ ಎದುರಿಸುತ್ತದೆ ಎಂದು ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ಆತಂಕ ವ್ಯಕ್ತಪಡಿಸಿದರು.
ಮಂಗಳವಾರದಂದು ನಗರದ ಕನ್ನಡ ಭವನದ ಸುವರ್ಣ ಸಭಾದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಮಾಧ್ಯಮ ಹಾಗೂ ಕನ್ನಡ ಸಾರಸ್ವತ ಲೋಕದಲ್ಲಿಯೇ ಪ್ರಥಮ ಪ್ರಯೋಗ ಎನ್ನಬಹುದಾದ “ಪತ್ರಕರ್ತ ಸಾಹಿತಿಗಳ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಂಗೀತ, ಮಾಧ್ಯಮ ಹಾಗೂ ನಾಟಕ ಇವುಗಳು ಅಭಿವ್ಯಕ್ತಿಯ ವಿವಿಧ ಪ್ರಕಾರಗಳಾಗಿವೆ. ಆದರೆ, ಸಾಹಿತ್ಯ, ಸಂಗೀತ, ನಾಟಕಗಳಿಗಿರುವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಕ್ಕೆ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜನಸಾಮಾನ್ಯರಿಗೆ ಇರುವ ಅಭಿವ್ಯಕ್ತಿ ಸ್ವಾತಂತ್ರ್ಯವೇ ಪತ್ರಿಕೋದ್ಯಮಕ್ಕಿದೆ. ಮಾಧ್ಯಮಕ್ಕಾಗಿ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಇಲ್ಲ ಎಂದರು.
ಸಾರ್ವಜನಿಕ ಅಭಿಪ್ರಾಯ ಮೂಡಿಸುವಲ್ಲಿ ಪತ್ರಿಕೋದ್ಯಮ ಮಹತ್ವದ ಪಾತ್ರ ವಹಿಸುವ ಮೂಲಕ ಪ್ರಜಾಪ್ರಭುತ್ವದ 4ನೇ ಅಂಗವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಕ್ಷೇತ್ರಾ ಉದ್ದಿಮೆಯಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋಕಾಕ್ ಚಳುವಳಿ, ಬಂಡಾಯ ಚಳುವಳಿ, ದಲಿತ ಚಳುವಳಿ ಹಾಗೂ 80 ದಶಕದ ಚಳುವಳಿಗಳನ್ನು ಉದಾಹರಿಸಿದ ಅವರು, ಇಂತಹ ಸಾಮಾಜಿಕ ಬಿಕ್ಕಟ್ಟು-ಗೊಂದಲಗಳಿಗೆ ಸಾಹಿತಿಗಳು ತಮ್ಮ ಅಭಿವ್ಯಕ್ತಿ ಮೂಲಕ ಸರಿದಾರಿ ತೋರಿದ್ದಾರೆ ಎಂದು ಗುಣಗಾನ ಮಾಡಿದರು.
ಸಾಹಿತಿಗಳಿಗೆ ತಮ್ಮ ಕೃತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಬೇಕು ಎಂಬುವ ಆಸೆ. ಹಾಗೆಯೇ ಪತ್ರಕರ್ತರಿಗೂ ತಮ್ಮ ಪತ್ರಿಕೆಯಲ್ಲಿ ತಮ್ಮ ಕೃತಿಗಳು ಪ್ರಕಟವಾಗಬೇಕು ಎಂಬುವ ಆಸೆ. ಆದ್ದರಿಂದ ಪತ್ರಕರ್ತರು, ಸಾಹಿತಿಗಳು ಅವಳಿ-ಜವಳಿ ಮಕ್ಕಳು ಇದ್ದ ಹಾಗೇ ಎಂದು ಅವರು ವರ್ಣಿಸಿದರು.
ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ ಅವರು ಮಾತನಾಡಿ, ಶಿಕ್ಷಣ, ಶಿಕ್ಷಕರು, ಶಿಕ್ಷೆ, ಲೇಖನ ಹಾಗೂ ಮಾಧ್ಯಮ (ಪತ್ರಿಕೆ) ಈ ಐದು ಆಯುಧಗಳು ಸಮಾಜವನ್ನು ಯಾವ ದಿಕ್ಕಿಗೆಬೇಕೋ ಆ ದಿಕ್ಕಿಗೆ ಕರೆದೊಯ್ಯುಯುವಂತಹ ದೊಡ್ಡ ಶಕ್ತಿಯಾಗಿವೆ. ಸಮಾಜದ ಬದಲಾವಣೆಗೆ ಪತ್ರಕರ್ತರು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸದಾ ಜಾಗೃತರಿದ್ದರೆ ಸಮಾಜ ಸರಿದಾರಿಯಲ್ಲಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯ ಕುಮಾರ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಕೊರೋನಾದಂತಹ ಮಹಾಮಾರಿಯನ್ನು ಈ ದೇಶ ಯಶಸ್ವಿಯಾಗಿ ಎದುರಿಸಿದೆ. ಈ ತಲೆಮಾರಿನ ಪತ್ರಕರ್ತರು ಯುದ್ಧದಂತಹ ವಾತಾವರಣವನ್ನು ನೋಡಿರಲಿಲ್ಲ. ಆದರೆ, ಕೊರೋನಾ ಸಮಯದಲ್ಲಿ ಯುದ್ಧೋಪಾದಿಯಲ್ಲಿ ಸವಾಲನ್ನು ಎದುರಿಸಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ‘ಕಾವ್ಯ ಕಾವಲು’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಗಮನಾಥ ರೇವತಗಾಂವ, ಖಜಾಂಚಿ ಅಶೋಕ ಕಪನೂರ, ಉಪಾಧ್ಯಕ್ಷರಾದ ದೇವೇಂದ್ರಪ್ಪ ಆವಂಟಿ, ಸುರೇಶ ಡಿ.ಬಡಿಗೇರ, ರಾಮಕೃಷ್ಣ ಬಡಶೇಷಿ, ರಾಜ್ಯದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ಶಿವರಂಜನ ಸತ್ಯಂಪೇಟ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಬಿ.ಸಿದ್ದೇಶ್ವರಪ್ಪ, ಖ್ಯಾತ ಎಲುಬು-ಕೀಲು ಶಸ್ತ್ರಜ್ಞ ಡಾ.ಎಸ್.ಬಿ.ಕಾಮರೆಡ್ಡಿ, ಬೆಂಗಳೂರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ದೇವೇಂದ್ರಪ್ಪ ಕಪನೂರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಸೇರಿದಂತೆ ಹಲವಾರು ಪತ್ರಕರ್ತರು, ಸಾಹಿತಿಗಳು ಉಪಸ್ಥಿತರಿದ್ದರು.