ಪ್ರಸಾರಾಂಗದಿಂದ ೧೨ ಪಠ್ಯಪುಸ್ತುಕಗಳ ಬಿಡುಗಡೆ

ಮಂಗಳೂರು, ಜೂ.೪- ಶಿಕ್ಷಣ ವ್ಯವಸ್ಥೆಯಲ್ಲಿ ಆಯಾ ಪ್ರದೇಶದ ಜ್ಞಾನ, ಕೌಶಲ ಮತ್ತು ಪ್ರತಿಭೆಗಳಿಗೆ ಅವಕಾಶ ಒದಗುವಂತಾ ಗಬೇಕು. ಪಠ್ಯಗಳಲ್ಲಿ ಜಾಗತಿಕ ಮತ್ತು ಸಾರ್ವಕಾಲಿಕ ಅಂಶಗಳೊಂದಿಗೆ ಸ್ಥಳೀಯತೆಗೆ ಒತ್ತು ಸಿಕ್ಕಾಗ ಇದು ಸಾಧ್ಯವಾಗುತ್ತದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುತ್ತಿರುವ ಕನ್ನಡ ಪಠ್ಯಪುಸ್ತಕಗಳಲ್ಲಿ ಸ್ಥಳೀಯತೆಗೆ ಅವಕಾಶ ಒದಗಿರುವುದು ಸಂತೋಷದ ವಿಷಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪ್ರಕಟಿಸಿದ ಪದವಿ ತರಗತಿಗಳ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರಿನ ೧೨ ಕನ್ನಡ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬದ್ಧತೆ, ಪ್ರಾಮಾಣಿಕತೆ ಮತ್ತು ಸಂಘಟಿತ ಪ್ರಯತ್ನದಿಂದ ಯಶಸ್ಸು ಮತ್ತು ಸಂತೋಷ ಎರಡೂ ಸಿಗುತ್ತದೆ. ಮಂಗಳೂರು ವಿವಿ ವ್ಯಾಪ್ತಿಯ ಕನ್ನಡ ಅಧ್ಯಾಪಕರು, ಅಧ್ಯಯನ ಮಂಡಳಿ, ಸಂಪಾದಕರು, ಪ್ರಸಾರಾಂಗ ಹಾಗೂ ವಿವಿ ಆಡಳಿತ ಸಂಯುಕ್ತ ಸಹಕಾರದಿಂದ ಈ ಪಠ್ಯಪುಸ್ತಕಗಳು ರೂಪುಗೊಂಡಿದೆ ಎಂದರು. ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ.ಕೆ, ಏಕಕಾಲದಲ್ಲಿ ಪ್ರಸಾರಾಂಗ ೧೨ ಕನ್ನಡ ಪಠ್ಯಪುಸ್ತಕ ಗಳನ್ನು ಬಿಡುಗಡೆ ಮಾಡುತ್ತಿರುವುದು ಪ್ರಶಂಸಾರ್ಹ ಸಾಧನೆ, ಎಂದರು. ಪ್ರಸಾರಾಂಗದ ನಿರ್ದೇಶಕ ಪ್ರೊ. ಅಭಯಕುಮಾರ್, ಕನ್ನಡ ಅಧ್ಯಯನ ಮಂಡಳಿಯ ಅಧ್ಯಕ್ಷ ಪ್ರೊ. ಸೋಮಣ್ಣ, ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಪಠ್ಯಪುಸ್ತಕಗಳ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಮೂಡುಕೊಣಾಜೆ ಉಪಸ್ಥಿತರಿದ್ದರು.