ಪ್ರಸಾದ್ – ಸಂತೋಷ್ ಭೇಟಿ ರಾಜ್ಯ ರಾಜಕೀಯ ಚರ್ಚೆ


ಬೆಂಗಳೂರು,ಆ.೫- ಕೇಂದ್ರದ ಮಾಜಿ ಸಚಿವ, ಸಂಸದ ಬಿ. ಶ್ರೀನಿವಾಸ್‌ಪ್ರಸಾದ್ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ರಾಜ್ಯರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು.
ಸಂಸತ್ ಅಧಿವೇಶನದಲ್ಲಿ ಭಾಗಿಯಾಗಿ ನಾಳಿನ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ದೆಹಲಿಯಲ್ಲಿರುವ ಬಿ. ಶ್ರೀನಿವಾಸ್ ಪ್ರಸಾದ್ ಅವರು, ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಹತ್ಯೆಗಳು, ಇದರಿಂದ ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಆಗಿರುವ ಹಾನಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ತಿರುಗಿ ಬಿದ್ದು, ಸಾಮೂಹಿಕ ರಾಜೀನಾಮೆ, ಪ್ರತಿಭಟನೆ ನಡೆಸಿರುವ ಬೆಳವಣಿಗೆಗಳ ಬಗ್ಗೆಯೂ ಈ ಇಬ್ಬರು ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ.
ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಬದಲಾವಣೆಗಳ ಅಗತ್ಯವಿದೆ. ಈಗಿನ ಸ್ಥಿತಿಯಲ್ಲೇ ಮುಂದುವರೆದರೆ ಮುಂದೆ ಚುನಾವಣೆ ಎದುರಿಸುವುದು ಕಷ್ಟವಾಗುತ್ತದೆ. ಪಕ್ಷ ಹಾಗೂ ಸರ್ಕಾರದ ವರ್ಚಸ್ಸನ್ನು ಬಲಪಡಿಸಲು ಕೆಲ ಕಠಿಣ ತೀರ್ಮಾನಗಳನ್ನು ಕೈಗೊಳ್ಳಿ ಎಂದು ಶ್ರೀನಿವಾಸ್‌ಪ್ರಸಾದ್ ಬಿ.ಎಲ್ ಸಂತೋಷ್‌ರವರಲ್ಲಿ ಮನವಿ ಮಾಡಿದರು ಎನ್ನಲಾಗಿದೆ.
ಪಕ್ಷದ ವರಿಷ್ಠರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ನಮ್ಮ ಬಳಿಯೂ ಸಾಕಷ್ಟು ಮಾಹಿತಿಗಳಿವೆ. ಸೂಕ್ತ ಸಂದರ್ಭದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಬಿ.ಎಲ್ ಸಂತೋಷ್ ಹೇಳಿದರು ಎನ್ನಲಾಗಿದೆ.