ಪ್ರಸಾದ್ ರಿಂದ ಮನಸ್ವಿನಿ, ಮೈತ್ರಿ ಯೋಜನೆ ಜಾರಿ: ರಂಗಸ್ವಾಮಿ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.06:- ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ 40 ರಿಂದ 65 ವರ್ಷದ ಅವಿವಾಹಿತ ಮಹಿಳೆಯರಿಗೆ, ಮಂಗಳಮುಖಿಯರಿಗೆ ಜೀವನ ಭದ್ರತೆ ಒದಗಿಸಲು ಕ್ರಮವಾಗಿ ಮನಸ್ವಿನಿ, ಮೈತ್ರಿ ಯೋಜನೆ ರೂಪಿಸಲು ವಿ. ಶ್ರೀನಿವಾಸಪ್ರಸಾದ್ ಅವರು ಕಾರಣ ಎಂದು ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯರೂ ಆದ ಮೈವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಹೇಳಿದರು.
ಮೈಸೂರು ಅಥ್ಲೆಟಿಕ್ಸ್ ಕ್ಲಬ್, ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮೈವಿವಿ ಓವೆಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಶ್ರದ್ಝಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಐದು ದಶಕಗಳ ಸುದೀರ್ಘ ರಾಜಕಾರಣ ಅನುಭವ ಶ್ರೀನಿವಾಸಪ್ರಸಾದ್ ಅವರಿಗಿತ್ತು. ವಿಧವೆಯರಿಗೆ, ವೃದ್ಧೆಯರಿಗೆ ಮಾಸಾಶನ ನೀಡಲಾಗುತ್ತದೆ. ಆದರೆ ವಿವಾಹ ಆಗದೇ ಇರುವ ಮಹಿಳೆಯರಿಗೆ ಏನು ಮಾಡುವುದು?. ಅವರಿಗೂ ಜೀವನ ಭದ್ರತೆ ಕಲ್ಪಿಸಬೇಕಲ್ಲ ಎಂದು ಮಾಸಿಕ ಎರಡು ಸಾವಿರ ರೂ. ಪಿಂಚಣಿ ನೀಡುವ ಈ ಯೋಜನೆ ರೂಪಿಸಿದರು. ರಾಜ್ಯದಲ್ಲಿ ಸುಮಾರು 1.34 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದು ಜೀವನ ಸಾಗಿಸುತ್ತಿದ್ದಾರೆ ಎಂದರು.
ಮೊಟ್ಟ ಮೊದಲನೆಯದಾಗಿ ಈ ಯೋಜನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ರಾಚಪ್ಪಾಜಿ ನಗರದಲ್ಲಿ ಜಾರಿಯಾಯಿತು. ಇದೀಗ ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳು ಕೂಡ ಈ ಯೋಜನೆ ಜಾರಿ ಮಾಡುತ್ತಿವೆ ಎಂದರು.
ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ದೇವರಾಜ್ ಮಾತನಾಡಿ, ಆನಾರೋಗ್ಯದಿಂದಾಗಿ ಸುಮಾರು 24 ವರ್ಷಗಳ ಹಿಂದೆಯೇ ಅಪ್ಪನನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ ಅವರ ಮನೋಸ್ಥೈರ್ಯ ಚೆನ್ನಾಗಿದ್ದರಿಂದ ಈವರೆಗೆ ಬದುಕುಳಿದು, ಜನಸೇವೆ ಮಾಡಿದರು. ಈ ಬಾರಿಯೂ ಅವರು ಆಸ್ಪತ್ರೆಯಿಂದ ಮನೆಗೆ ಮರಳುತ್ತಾರೆ ಎಂದುಕೊಂಡಿದ್ದೆವು. ಆದರೆ ಆ ರೀತಿಯಾಗಲಿಲ್ಲ ಎಂದು ಭಾವುಕರಾದರು.
ಶ್ರೀನಿವಾಸಪ್ರಸಾದ್ ಅವರು ಐವತ್ತು ವರ್ಷಗಳ ರಾಜಕಾರಣದಲ್ಲಿ ಹಲವಾರು ಮಂದಿಗೆ ಮಾರ್ಗದರ್ಶನ ಮಾಡಿ, ಬೆಳೆಸಿದ್ದಾರೆ,. ಇನ್ನಷ್ಟು ಮಂದಿ ಅವರ ಮಾರ್ಗದರ್ಶನದಲ್ಲಿ ಬೆಳೆಯುವ ನಿರೀಕ್ಷೆಯಲ್ಲಿದ್ದರು. ಅದರಲ್ಲೂ ನಾನು ಒಬ್ಬಳು. ಆದರೆ ಅದಕ್ಕೆ ಅವಕಾಶವಾಗದಂತೆ ಅಪ್ಪ ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದರು.
ಎಂ. ಯೋಗೇಂದ್ರ ಮಾತನಾಡಿ, ಸ್ವಾಭಿಮಾನಿ, ಶುದ್ಧ ಹಸ್ತದ ರಾಜಕಾರಣಿಯಾಗಿದ್ದ ಶ್ರೀನಿವಾಸಪ್ರಸಾದ್ ಅವರು ಸ್ವತಃ ಕ್ರೀಡಾಪಟು ಹಾಗೂ ಕ್ರೀಡಾಪ್ರೇಮಿಯಾಗಿದ್ದಾರೆ. ಫುಟ್ ಬಾಲ್‍ನಲ್ಲಿ ರಾಜ್ಯ ತಂಡಕ್ಕ ಆಯ್ಕೆಯಾದ ಸಂದರ್ಭದಲ್ಲಿ ರಾಜಕಾರಣದತ್ತ ತೆರಳಿ, ಅಲ್ಲಿಗೆ ಕ್ರೀಡೆ ಮೊಟಕಾಯಿತು. ನನ್ನಂಥ ಕ್ರೀಡಾಪಟು ಈ ಮಟ್ಟಕ್ಕೆ ಬೆಳೆಸಲು ಶ್ರೀನಿವಾಸಪ್ರಸಾದ್ ಅವರ ಪೆÇ್ರೀತ್ಸಾಹವೇ ಕಾರಣ ಎಂದರು.
ಪಿ.ಜಿ. ಸತ್ಯನಾರಾಯಣ್ ಮಾತನಾಡಿ, ನನಗೆ ಶ್ರೀನಿವಾಸಪ್ರಸಾದ್ ಅವರು ಅರವತ್ತರ ದಶಕದಿಂದಲೂ ಪರಿಚಯ. ಅವರು ಹಾಗೂ ಮೈವಿವಿ ವಿಶ್ರಾಂತ ಕ್ರೀಡಾ ನಿರ್ದೇಶಕ ಡಾ.ಸಿ. ಕೃಷ್ಣ ಅವರು ಸ್ನೇಹಿತರಾಗಿದ್ದರು. ಯಾವಾಗಲೂ ಕ್ರೀಡೆಗೆ ಪೆÇ್ರೀತ್ಸಾಹ ನೀಡುತ್ತಿದ್ದರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಐದು ದಶಕಗಳ ರಾಜಕಾರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಆದರ್ಶ ಪಾಲಿಸಿ, ಸಮಸಮಾಜ, ಸಾಮರಸ್ಯ, ಸಹಬಾಳ್ವೆಯ ವಾತಾವರಣ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲ ಶೋಷಿತರ ಪರ ಧ್ವನಿಯಾಗಿದ್ದರು. ಜೊತೆಗೆ ಎಲ್ಲಾ ವರ್ಗಗಳ ಜನಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಧೀರಜ್ ಪ್ರಸಾದ್, ಪಿ.ಜಿ. ಚಂದ್ರಶೇಖರ್, ಸಿ.ಕೆ.ಮರುಳೀಧರ್, ಮಹದೇವಯ್ಯ, ಜಿ.ಆರ್. ಪ್ರಭಾಕರ್, ಕೆ.ಎನ್. ಸೋಮಶೇಖರ್, ಟಿ.ಎಸ್. ರವಿಕುಮಾರ್, ಮಹದೇವರಾವ್, ಎಚ್.ಆರ್. ರಾಮಸ್ವಾಮಿ, ಪದ್ಮನಾಭ, ಕೆ.ಟಿ. ಬಲರಾಮೇಗೌಡ, ಅಭಿಷೇಕ್, ಎನ್. ಪ್ರಸಾದ್, ರೇಖಾ ಸೇರಿ ಇದ್ದರು.