ಮೈಸೂರು: ಏ.14:- ವರುಣ ಹಾಗೂ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ವಿ.ಸೋಮಣ್ಣ ಮೈಸೂರಿಗೆ ಆಗಮಿಸಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಬಳಿಕ ಮಾಜಿ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಭೇಟಿ ಮಾಡಿ ಒಂದು ತಾಸಿಗೂ ಹೆಚ್ಚುಕಾಲ ಗೌಪ್ಯ ಮಾತುಕತೆ ನಡೆಸಿದರು.
ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಕ್ಕೆ ತೆರಳಿದ ವಿ.ಸೋಮಣ್ಣ ತಮ್ಮ ಸ್ಪರ್ಧೆ ಹಾಗೂ ಕ್ಷೇತ್ರದ ಗೆಲುವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಈ ವೇಳೆ ಮಾತನಾಡಿದ ಮಾಜಿ ಸಂಸದ ಶ್ರೀನಿವಾಸ್ ಪ್ರಸಾದ್, ವರುಣಾ ಕ್ಷೇತ್ರದ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೀವಿ. ಎಲ್ಲವನ್ನು ಬಹಿರಂಗವಾಗಿ ಹೇಳಲಾಗಲ್ಲ. ನನ್ನದೊಂದು ರೀತಿ ಇಕ್ಕಟ್ಟಿನ ಸ್ಥಿತಿ ಇದೆ. ಹೈಕಮಾಂಡ್ ಎರಡು ಕ್ಷೇತ್ರದಲ್ಲಿ ನಿಲ್ಲಲೇ ಬೇಕು ಎಂದು ಹೇಳಿದೆ. ಆ ಪ್ರಕಾರ ನಾನು ಚುನಾವಣೆಗೆ ನಿಲ್ಲಲೇಬೇಕಿದೆ. ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿರೊದರ ಹಿಂದೆ ಯಾವುದೇ ಚುನಾವಣೆ ತಂತ್ರ ಇಲ್ಲ. ಎರಡು ಕಡೆ ನಿಲ್ಲೋದರ ಬಗ್ಗೆ ಹೈಕಮಾಂಡ್ ಬಲವಂತದಿಂದ ನಿಲ್ಲುತ್ತಿದ್ದೇನೆ ಎಂದಿದ್ದಾರೆ ಎಂದು ಮಾಹಿತಿ ನೀಡಿದರು.
ಎ.17 ರಂದು ನಾಮ ಪತ್ರ ಸಲ್ಲಿಸಲಿದ್ದಾರೆ. ಅಂದು ಸಿಎಂ ಸಹ ಆಗಮಿಸಲಿದ್ದಾರೆ. ಇನ್ನೂ ಯತೀಂದ್ರ ಸಿದ್ದರಾಮಯ್ಯ ನಮ್ಮದೇ ಗೆಲುವು ಎಂಬ ಹೇಳಿಕೆಗೆ ಪ್ರತಿಕ್ರಯಿಸಿ, ಕೇವಲ ವರುಣ ಅಲ್ಲ 224 ಕ್ಷೇತ್ರಗಳಲ್ಲೂ ಜನರೇ ತೀರ್ಮಾನ ಮಾಡೋದು, ಅದು ಮೇ.10ಕ್ಕೆ ತಿಳಿಯಲಿದೆ. ನಾನು ಈಗ ನಡೆಯುತ್ತಿರೊ ವಿಧಾನಸಭಾ ಚುನಾವಣೆ ಪ್ರಚಾರವೇ ಅಂತಿಮ ಪ್ರಚಾರವಾಗಲಿದೆ. ಈಗಾಗಲೇ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೀನಿ.
ಸದ್ಯ ನಾನು ಸಿದ್ದರಾಮಯ್ಯ ಪರ ಚುನಾವಣೆ ಮಾಡಲಾಗುತ್ತಾ, ಸಿದ್ದು ವಿರುದ್ದ ಚುನಾವಣೆ ಮಾಡಬೇಕಿದೆ. ಚಾಮುಂಡೇಶ್ವರಿಲೂ ವಿರೋಧ ಮಾಡಿದ್ದೆ, ಈಗಲೂ ಮಾಡುತ್ತೇನೆಂದರು.
ರಾಮದಾಸ್ ಗೆ ಟಿಕೆಟ್ ಕೈ ತಪ್ಪಿರೊ ವಿಚಾರ ನನಗೆ ಗೊತ್ತಿಲ್ಲ. ಅಲ್ಲಿನ ಸ್ಥಳೀಯರ ಅಭಿಪ್ರಾಯದ ಜೊತೆಗೆ ಸಮೀಕ್ಷೆಗಳ ಆಧರಿಸಿ ಟಿಕೆಟ್ ನೀಡುತ್ತಿದ್ದಾರೆ. ಬಹುಶಃ ಇನ್ನೆರಡು ದಿನಗಳಲ್ಲಿ ಗೊಂದಲ ಬಗೆಹರಿಯಲಿದೆ ಎಂದರು. ಈ ವೇಳೆ ಸಂಸದ ಪ್ರತಾಪಸಿಂಹ, ಎಂಸಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಸೇರಿ ಅನೇಕರು ಉಪಸ್ಥಿತರಿದ್ದರು.