‘ಪ್ರಸವಪೂರ್ವ ಭೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ’

ಮಂಗಳೂರು, ನ.೧೩- ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪಿ.ಸಿ-ಪಿ.ಎನ್.ಡಿ.ಟಿ. ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಅಪರಾಧವಾಗಿದ್ದು, ಮೊದಲಿನ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ೧೦,೦೦೦ ರೂ. ದಂಡ ವಿಧಿಸಲಾಗುವುದು. ೨ನೇ ಅಪರಾಧಕ್ಕೆ ೫ ವರ್ಷ ಜೈಲು ಶಿಕ್ಷೆ ಹಾಗೂ ೫೦,೦೦೦ ರೂ. ವಿಧಿಸಲಾಗುವುದು ಎಂದರು. ಸ್ಕ್ಯಾನಿಂಗ್ ಸೆಂಟರ್‌ಗಳು ಪ್ರತಿವರ್ಷ ನಿಗದಿತ ದಿನಾಂಕದೊಳಗೆ ತಮ್ಮ ಪರವಾನಿಗೆಯನ್ನು ನವೀಕರಣಗೊಳಸಿಬೇಕು. ಇಲ್ಲದಿದ್ದರೆ ಅಂತಹ ಸ್ಕಾನಿಂಗ್ ಸೆಂಟರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಸರಕಾರ ನೀಡುವ ಮಾರ್ಗಸೂಚಿ ಅನುಸಾರ ಅಗತ್ಯ ದಾಖಲಾತಿ ಹಾಗೂ ನೋಂದಣಿ ಕಡತಗಳನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದರು. ಸಮಿತಿಯ ಸದಸ್ಯರು ಆಗಿಂದ್ದಾಗೆ ಸ್ಕಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಡತಗಳ ನಿರ್ವಹಣೆಯ ಪರಿಶೀಲನೆ ಮಾಡಬೇಕು. ಸರಕಾರದ ನಿಯಮಾನುಸಾರ ಅಲ್ಟ್ರಾಸೌಂಡ್ ಸ್ಕಾನಿಂಗ್ ಸೌಲಭ್ಯ ಹೊಂದಿರುವ ಎಲ್ಲ ಚಿಕಿತ್ಸಾಲಯಗಳು ಜೆನಿಟಿಕ್ ಕ್ಲಿನಿಕ್‌ಗಳು ಹಾಗೂ ಜೆನಿಟಿಕ್ ಪ್ರಯೋಗಾಲಯಗಳು ಸಂಬಂಧಪಟ್ಟ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಅವರ ಮೇಲೂ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷೆ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ.ದೀಪಾ, ಅನಿತ್ ರಾಜ್ ಭಟ್, ಡಾ. ಚಿದಾನಂದ ಮೂರ್ತಿ, ಡಾ.ಅಮೃತ ಭಂಡಾರಿ, ಡಾ.ರೀಟಾ ನೊರೋನ್ಹ, ಡಾ.ವತ್ಸಲ ಕಾಮತ್, ಮಂಜುನಾಥ್ ಬಿ. ಉಪಸ್ಥಿತರಿದ್ದರು.