ಪ್ರಸನ್ನ ಜೆಡಿಎಸ್‌ಗೆ ಸೇರ್ಪಡೆ: ಕೈ ವಿರುದ್ಧ ವಾಗ್ದಾಳಿ

ಚನ್ನಪಟ್ಟಣ, ಮಾ.೩೧- ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದಿಂದ ಮಾನಸಿಕವಾಗಿ ನೊಂದ ನಾನು ಜೆಡಿಎಸ್ ಸೇರಿದ್ದೇನೆ ಎಂದು ಸಮಾಜ ಸೇವಕ ಪ್ರಸನ್ನ ಪಿ.ಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಕಾಂಗ್ರೆಸ್‌ನ ಕೆಲ ಮುಖಂಡರು ಹಾಗೂ ಬ್ಲಾಕ್ ಅಧ್ಯಕ್ಷರು ವಿರೋಧ ಮಾಡಿ, ನನ್ನ ವಿರುದ್ಧ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಬಳಿ ಸುಳ್ಳು ಆರೋಪಗಳನ್ನು ತುಂಬಿ ಟಿಕೆಟ್ ಸಿಗದಂತೆ ಮಾಡಿದರು ಎಂದು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ ಸಮಾಜ ಸೇವಕ ಪ್ರಸನ್ನ ಪಿ.ಗೌಡ ಕಾಂಗ್ರೆಸ್‌ನಲ್ಲಿ ತಮಗಾದ ನೋವುಗಳನ್ನು ಹಂಚಿಕೊಂಡರು.
ಕ್ಷೇತ್ರದಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾನು ಜೀವ ತುಂಬುವ ಮೂಲಕ ಸಂಘಟನೆ ಮಾಡಿ ಪಕ್ಷಕ್ಕೆ ಜೀವ ತುಂಬಿದ್ದೆ. ಆದರೆ ನನ್ನ ಏಳಿಗೆ ಸಹಿಸದ ಕಾಂಗ್ರೆಸ್‌ನ ಕೆಲ ಮುಖಂಡರು ಆರಂಭದಿಂದಲೇ ಹಿನ್ನಡೆ ಮಾಡಲು ಪ್ರಾರಂಭಿಸಿದರು. ನನ್ನ ವೇಗಕ್ಕೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸ್ಪಂದಿಸುತ್ತಿರಲಿಲ್ಲ. ಈ ಬಗ್ಗೆ ನಾನು ಅವರನ್ನು ಪ್ರಶ್ನೆ ಮಾಡಿದರೆ ಅದನ್ನು ಬೇರೆಯದೆ ಕತೆ ಕಟ್ಟಿ ಡಿಕೆಶಿ ಸಹೋದರರ ಬಳಿ ನನ್ನ ವಿರುದ್ಧ ಚಾಡಿ ಹೇಳುತ್ತಿದ್ದರು. ಭಾರತ್ ಜೋಡೋ ಯಾತ್ರೆಯ ವೇಳೆಯೇ ನನ್ನ ವಿರುದ್ಧ ಡಿಕೆಶಿ ಅವರಿಗೆ ದೂರು ನೀಡಿದ್ದರು. ಆದರೆ ನೂರಾರು ಮಂದಿ ಮುಂದೆ ನನಗೆ ಅವಮಾನ ಮಾಡಿದರು ಎಂದರು.
ಈ ನಿಟ್ಟಿನಲ್ಲೇ ನಾನು ಒಂದು ತಿಂಗಳ ಕಾಲ ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದೆ. ಇದಾದ ಬಳಿಕ ಅವರೇ ಕರೆದು ಸಮಾಧಾನ ಪಡಿಸಿ ಮುಂದೆ ಎಲ್ಲ ಸರಿಯಾಗುತ್ತದೆ ಎಂದು ಭರವಸೆ ನೀಡಿ ನಿನಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿ. ೭ ಮುಖಂಡರಿಂದ ಟಿಕೆಟ್‌ಗೆ ಅರ್ಜಿ ಹಾಕಿಸಿ ಬಳಿಕ ಜಿಲ್ಲಾ ಪಂಚಾಯ್ತಿ ವಾರು ನಮಗೆ ಸಂಘಟನೆಗೆ ಜವಾಬ್ದಾರಿ ನೀಡಿದರು. ಆಗಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆ, ಅಲ್ಲದೆ ಕೋಟೆ ಮಾರಮ್ಮದೇವಸ್ಥಾನದ ಮುಂಭಾಗ ಸಾವಿರ ಜನರನ್ನು ಸೇರಿಸಿ ಅದ್ದೂರಿ ಕಾರ್ಯಕ್ರಮ ನಡೆಸಿದ್ದೆ. ಯಶಸ್ವಿಯಾಯಿತು. ಇಷ್ಟಲ್ಲಾ ಮಾಡಿದರೂ ಇಲ್ಲದ ಪ್ರಚಾರ ಮಾಡಿ ನನಗೆ ಟಿಕೆಟ್ ನೀಡದಂತೆ ಡಿಕೆಶಿ ಸಹೋದರರನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದರು. ನನಗೆ ಟಿಕೆಟ್ ನೀಡಲಿಲ್ಲ ಎಂದು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಮತ್ತು ಕೆಲ ಮುಖಂಡರು ವಿರುದ್ಧ ಪ್ರಸನ್ನ ಗಂಭೀರ ಆರೋಪಿಸಿದರು.