ಪ್ರಶ್ನೆ ಕುತೂಹಲಗಳೇ ಜೀವನ: ಗೋಪಾಲಕೃಷ್ಣ

ಕೋಲಾರ ಏ೨: ಹುಟ್ಟಿನಿಂದ ಅಂತಿಮ ಕ್ಷಣದವರೆಗೂ ಯಾವುದೇವಿಚಾರದಲ್ಲಿ ಪ್ರಶ್ನಿಸುವ ಮನೋಭಾವ ಬರಬೇಕು ಆಗ ಕುತೂಹಲಗಳಿಗೆ ತೆರೆ ಸಿಗುತ್ತದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಎನ್. ಗೋಪಾಲಕೃಷ್ಣಗೌಡ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ವಿಜ್ಞಾನ ಸಮಿತಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ, ಪವಾಡ ರಹಸ್ಯ, ಆರೋಗ್ಯ ವಿಚಾರ ಸಂಕಿರಣ ಹಾಗೂ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜನಸಾಮಾನ್ಯರಲ್ಲಿ ಆಗಿಂದಾಗ್ಗೆ ಸಮಸ್ಯೆಗಳ ಜೊತೆಗೆ ಕುತೂಹಲಗಳು ಇದೆ. ಈ ಕುತೂಹಲ ಉಂಟಾಗಬೇಕಾದರೆ ಈ ಬಗ್ಗೆ ಪೂರ್ಣ ಮಾಹಿತಿ ಮತ್ತು ಅರಿವು ಉಂಟಾಗಬೇಕು ಇದಕ್ಕಾಗಿ ಚಿಂತನ ಮಂಥನ ಕಾರ್ಯಾಗಾರಗಳು ನಡೆಯಬೇಕು, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಲ್ಲದೆ ವಿದ್ಯಾರ್ಥಿಗಳು ಪ್ರಶ್ನಿಸುವ ಮತ್ತು ಮಾನವೀಯತೆ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಆದರ್ಶಪ್ರಾಯರಾಗಬೇಕು ಎಂದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ ಆರ್ ಅಶೋಕ್ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಜ್ಞಾನ ವಿಜ್ಞಾನದ ಅರಿವಿನ ಬಗ್ಗೆ ಜಾಗೃತಿ ಉಂಟು ಮಾಡುವ ಅಗತ್ಯವಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪವಾಡ ರಹಸ್ಯ ಬಹಲು ಕಾರ್ಯಕ್ರಮವನ್ನು ಕೆ.ಶ್ರೀನಿವಾಸ್ ರವರು ನಡೆಸಿಕೊಟ್ಟರು. ಹಾಗೂ ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕೆ.ವಾಣಿರವರ ಆರೋಗ್ಯದ ಕುರಿತು ವಿಚಾರ ಸಂಕಿರಣ ನಡೆಸಿಕೊಟ್ಟರು. ನಂತರ ಕೆ.ಶ್ರೀನಿವಾಸ್ ಮತ್ತು ಕೆ.ವಾಣಿ ರವರುಗಳನ್ನು ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಇ.ಸಿ.ಒ. ಆರ್.ಶ್ರೀನಿವಾಸನ್, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸ್, ಜ್ಯೂನಿಯರ್ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಜಾರಿ ಅಧಿಕಾರಿ ಡಾ.ಶರಣಪ್ಪ ಗಬ್ಬೂರ್, ಪಿ.ಡಿ.ಒ ಮುನಿರಾಜು, ಶಾಲಾ ಮುಖ್ಯೋಪಾದ್ಯಾಯರಾದ ಓಂ ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.