ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಗೊಂದಲಕ್ಕೆಡೆ ಬೇಡ

ಕೋಲಾರ,ಏ. ೧-ನಗರದ ನೂತನ ಸರ್ಕಾರಿ ಪ್ರೌಢಶಾಲಾ ಕೇಂದ್ರದಲ್ಲಿ ಮಾ.೩೧ ರಿಂದ ಆರಂಭಗೊಳ್ಳುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುಖ್ಯ ಅಧೀಕ್ಷಕ ಜಿ.ಎನ್.ವೇಣುಗೋಪಾಲ್ ನೇತೃತ್ವದಲ್ಲಿ ಸಕಲ ಸಿದ್ದತೆ ನಡೆಸಿದ್ದು, ಪರೀಕ್ಷಾ ಸಿಬ್ಬಂದಿ ಗೊಂದಲಕ್ಕೆ ಒಳಗಾಗದೇ ಮಾಧ್ಯಮ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸೂಚನೆ ನೀಡಿದರು.
ಮೊದಲ ದಿನದ ಪ್ರಥಮ ಭಾಷಾ ಪರೀಕ್ಷೆಗೆ ಕೇಂದ್ರಗಳಲ್ಲಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯನ್ನೂ ಮಾ.೩೦ ರಂದು ನಡೆಸಿದ್ದು, ಪರೀಕ್ಷಾ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ನೀಡಿ ಮಾತನಾಡುತ್ತಿದ್ದರು. ನಡೆಸಲಾಯಿತು.
ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ, ಈ ಕೇಂದ್ರದಲ್ಲಿ ಕನ್ನಡ,ಉರ್ದು,ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಇರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಗೊಂದಲ ಮಾಡಿಕೊಳ್ಳದಿರಿ, ಆಯಾ ಮಾಧ್ಯಮದ ವಿದ್ಯಾರ್ಥಿಯ ಮಾಹಿತಿ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸಲಹೆ ನೀಡಿದರು.
ಕ್ಲಸ್ಟರ್ ಹಂತದ ವಿವಿಧ ಶಾಲೆಗಳಿಂದ ಆಗಮಿಸಿರುವ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ ನೇಮಕಗೊಂಡಿದ್ದು, ಪರೀಕ್ಷೆಗೆ ನೊಂದಣಿ ಸಂಖ್ಯೆ ದಾಖಲಿಸುವ ಕಾರ್ಯ ಮುಗಿಸಿದರು.
ಪರೀಕ್ಷಾ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆಯಂತೆ ನೇಮಕಗೊಂಡಿರುವ ಶಿಕ್ಷಕರ ಸಭೆ ನಡೆಸಿದ ಮುಖ್ಯ ಅಧೀಕ್ಷಕ ಜಿ.ಎನ್.ವೇಣುಗೋಪಾಲ್, ಮೊಬೈಲ್ ತರಬೇಡಿ, ಮಕ್ಕಳಿಗೆ ಗೊಂದಲವಾಗದ ರೀತಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು.
ಕೊಠಡಿ ಮೇಲ್ವಿಚಾರಕರು, ಡಿ ದರ್ಜೆ ಸಿಬ್ಬಂದಿ ಸೇರಿದಂತೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಮೊಬೈಲ್ ತಂದಿದ್ದರೆ ಶಿಕ್ಷಕರು ಆರಂಭದಲ್ಲೇ ತಮ್ಮ ಮೊಬೈಲ್‌ಅನ್ನು ಇಲಾಖೆ ನೇಮಿಸಿರುವ ಮೊಬೈಲ್ ಸಂಗ್ರಹಣಾಧಿಕಾರಿಗೆ ಒಪ್ಪಿಸಿ ಪರೀಕ್ಷಾಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಕೇಂದ್ರದ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದು, ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳು ಪರೀಕ್ಷಾದಿನಗಳಂದು ಬೆಳಗ್ಗೆ ೮ ಗಂಟೆಯಿಂದ ಸಂಜೆ ೩ ಗಂಟೆವರೆಗೂ ತೆರೆಯದಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಕ್ರಮವಹಿಸಲಾಗಿದೆ, ಪರೀಕ್ಷಾಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಬೆಳಗ್ಗೆ ೯ ಗಂಟೆಗೆ ಹಾಜರಾಗುವಂತೆ ಸೂಚಿಸಿದ ಅವರು, ಆಯಾ ದಿನದಂದು ಇರುವ ಪರೀಕ್ಷಾ ವಿಷಯದ ಶಿಕ್ಷಕರನ್ನು ಪರೀಕ್ಷೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಭಿರಕ್ಷಕಿ ರಾಧಮ್ಮ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಮಾರ್ಗಾಧಿಕಾರಿಗಳು ಬೆಳಗ್ಗೆ ೮ ಗಂಟೆಗೆ ತರುವುದರಿಂದ ಮೊದಲೇ ಹಾಜರಿದ್ದು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ, ಕೊಠಡಿಯಲ್ಲಿ ಪರೀಕ್ಷಾ ಕಾರ್ಯ ಹಾಗೂ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ವಹಿಸಲು ಮನವಿ ಮಾಡಿದರು.