ಪ್ರಶ್ನೆಪತ್ರಿಕೆ ಕಿಂಗ್‌ಪಿನ್ ಗುರೂಜಿ ಕೊರೊನಾಗೆ ಬಲಿ


ಬೆಂಗಳೂರು,ಮೇ.೧೯-ಪಿಯುಸಿ, ಕೆಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಕಿಂಗ್ ಪಿನ್ ಎಂದೇ ಕುಖ್ಯಾತಿ ಗಳಿಸಿದ್ದ ಶಿವಕುಮಾರಯ್ಯ ಆಲಿಯಾಸ್ ಗುರೂಜಿ ಕೊರೊನಾಗೆ ಬಲಿಯಾಗಿದ್ದಾನೆ.
ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದ ಗುಬ್ಬಿ ತಾಲೂಕಿನ ಬಿದರೆ ಕಾಗ್ಗೆರೆ ಮೂಲದ ಶಿವಕುಮಾರಯ್ಯ(೬೫)ಗೆ ಕೊರೊನಾ ಸೋಂಕು ತಗುಲಿ ಉಸಿರಾಟ ಸಮಸ್ಯೆ ಕಂಡುಬಂದಿದೆ.
ಕೊಡಲೇ ಆತನನ್ನು ಕೊರಟಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಉಸಿರಾಟ ತೊಂದರೆಯಿಂದ ನಿನ್ನೆ ಸಾವನ್ನಪ್ಪಿದ್ದಾನೆ.
೨೦೧೬ರಲ್ಲಿ ಬಂಧನ:
ನಿವೃತ್ತ ಉಪನ್ಯಾಸಕನಾಗಿದ್ದ ಗೂರೂಜಿಯು
ಪ್ರಶ್ನೆಪತ್ರಿಕೆ ಸೋರಿಕೆ ಪಿತಾಮಹ, ಕಿಂಗ್ ಪಿನ್ ಎಂದೆಲ್ಲಾ ಕುಖ್ಯಾತಿ ಗಳಿಸಿಕೊಂಡಿದ್ದ ಈತ ದ್ವೀತಿಯ ಪಿಯುಸಿಯ ರಸಾಯನಿಕ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಬಾರಿಗೆ ೨೦೧೬ರಲ್ಲಿ ಪೊಲೀಸರು ಬಂಧಿಸಿದ್ದರು.
ಪಿಯುಸಿ ಪ್ರಶ್ನೆಪತ್ರಿಕೆವಲ್ಲದೆ ಕೆಪಿಎಸ್ ಸಿ ಆಯೋಜಿಸುವ ಕಾನ್?ಸ್ಟೇಬಲ್, ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ಗಳಿಸುತ್ತಿದ್ದ.
೫೦ ಸಾವಿರ ಬಹುಮಾನ:
ಈತನ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅನಂತರ ಸಿಐಡಿಗೆ ಹಸ್ತಾಂತರವಾಗಿತ್ತು. ಈತನ ಪತ್ತೆಗಾಗಿ ಅಂದಿನ ಸರ್ಕಾರ ೫೦ ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು. ತಲೆಮರೆಸಿಕೊಂಡಿದ್ದ ಶಿವಕುಮಾರ್?ನನ್ನು ಅಂತಿಮವಾಗಿ ನಗರದ ಗಾರ್ವೆಭಾವಿಪಾಳ್ಯ ಬಳಿ ಸಿಐಡಿ ಪೊಲೀಸರು ಬಂಧಿಸಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಅಭ್ಯರ್ಥಿಗಳಿಗೆ ಮಾರಾಟ ಅಕ್ರಮ ಸಂಪಾದನೆ ದಾರಿ ಕಂಡುಕೊಂಡಿದ್ದ ಈತನ ವಿರುದ್ಧ ಬೆಂಗಳೂರು, ತುಮಕೂರು ಹಾಗೂ ಉತ್ತರ ಕರ್ನಾಟಕ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೦ಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿವೆ.
ಕೋಕಾ ಕಾಯ್ದೆ ದಾಖಲು:
ಮಲ್ಲೇಶ್ವರ ಪೊಲೀಸರು ಶಿವಕುಮಾರಯ್ಯ ವಿರುದ್ಧ ಕೋಕಾ ಕಾಯ್ದೆ ದಾಖಲಿಸಿ ಬಂಧಿಸಿದ್ದರು ನಂದಿನಿ ಲೇಔಟ್ ಮನೆಯೊಂದರಲ್ಲಿ ವಾಸವಾಗಿ ನಿವೃತ್ತ ಉಪನ್ಯಾಸಕನಾಗಿದ್ದ ಈತ ಟ್ಯುಟೋರಿಯಲ್ ನಡೆಸುತ್ತಾ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿಸುತ್ತಿದ್ದನು. ಶಿಕ್ಷಣ ಇಲಾಖೆ ಅಧಿಕಾರಿಗಳ ಪರಿಚಯಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಗೊತ್ತಿರುವ ಅಧಿಕಾರಿಗಳಿಗೆ ಹಣದ ಆಮಿಷವೊಡ್ಡಿ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣನಾಗುತ್ತಿದ್ದನು.
ಸುಮಾರು ನಾಲ್ಕೈದು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಈತ ೨೦೧೮ರಲ್ಲಿ ಜಾಮೀನು ಪಡೆದು ಹೊರಬಂದಿದ್ದನು.
ಮತ್ತೆ ಪೊಲೀಸ್ ನೇಮಕಾತಿ ಪ್ರಶ್ನೆಪತ್ರಿಕೆಗಳ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇದೇ ಆರೋಪದಡಿ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ನೇತೃತ್ವದಲ್ಲಿ ಡಿಸಿಪಿ ಗಿರೀಶ್ ಅವರು ಬಂಧಿಸಿ ಜೈಲಿಗಟ್ಟಿದ್ದರು.
ಕೇಸ್ ಗಳು ಖುಲಾಸೆ:
ಇದೀಗ ಕೊರೊನಾ ಹಿನ್ನೆಲೆಯಲ್ಲಿ ಸಾವನ್ನಪ್ಪಿರುವುದರಿಂದ ಆತನ ಮೇಲಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಳ್ಳಲಿವೆ. ಅದಕ್ಕೂ ಮುನ್ನ ಸಂಬಂಧಪಟ್ಟ ತನಿಖಾಧಿಕಾರಿಗಳು ಆತನ ಮೇಲಿರುವ ಪ್ರಕರಣಗಳ ವಿವರ ಹಾಗೂ ಸಾವನ್ನಪ್ಪಿರುವ ಬಗ್ಗೆ ಪ್ರಮಾಣಪತ್ರ ಕೋರ್ಟ್?ಗೆ ನೀಡಲಿದ್ದಾರೆ.