ಪ್ರಶ್ನೆಗಳಿಗೆ ಉತ್ತರ ನೆಪ ಹೇಳಬೇಡಿ ಹೊರಟ್ಟಿ ಸೂಚನೆ

ಬೆಂಗಳೂರು, ಮಾ. ೧೫- ಸದನದಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸದನ ಆರಂಭವಾದ ಮೇಲೆ ಪ್ರಶ್ನೆ ವರ್ಗಾವಣೆಯಾಗಿದೆ ಎನ್ನುವ ಬದಲು ಸಂಬಂಧಿಸಿದ ಸಚಿವರು ಸೂಕ್ತ ಉತ್ತರ ನೀಡುವಂತೆ ನೋಡಿಕೊಳ್ಳಬೇಕು ಎಂದು ಸಭಾಪತಿ ಬಸವರಾಜಹೊರಟ್ಟಿ ಅವರು ಸರ್ಕಾರಕ್ಕೆ ಸೂಚನೆ ನೀಡಿದರು.
ಸದನದಲ್ಲಿ ಹಾಜರಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಅವರಿಗೆ ಈ ಸೂಚನೆ ನೀಡಿದ ಸಭಾಪತಿಗಳು, ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಆಗ ಪ್ರತಿಕ್ರಿಯಿಸಿದ ಲಕ್ಷ್ಮಣಸವದಿ ಅವರು, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ. ಸಕಾಲದಲ್ಲಿ ಉತ್ತರಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು, ಸಭಾಪತಿಗಳು ಈಗಾಗಲೇ ಹಲವು ಬಾರಿ ಈ ವಿಷಯದ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಿದ್ದರೂ ಪದೇ ಪದೇ ಈ ರೀತಿಯ ತಪ್ಪುಗಳು ನಡೆಯುತ್ತಿವೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದರು.
ಆಗ ಮಧ್ಯ ಪ್ರವೇಶಿಸಿದ ಸಭಾಪತಿಗಳು, ಈ ವಿಷಯ ಕುರಿತು ಈಗಾಗಲೇ ಸೂಚನೆ ನೀಡಿದ್ದೇನೆ. ಮತ್ತೆ ಮತ್ತೆ ವಿಷಯ ಪ್ರಸ್ತಾಪಿಸುವುದು ಬೇಡ. ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಉಪಮುಖ್ಯಮಂತ್ರಿಗಳಿಗೆ ಸೂಚಿಸಿದರು.