ಪ್ರಶಿಕ್ಷಣ ವರ್ಗದಿಂದಲೇ ಬಿಜೆಪಿ ಪಕ್ಷದ ಶಕ್ತಿ ವೃದ್ಧಿ: ರೇವೂರ್

ಕಲಬುರಗಿ:ನ.21:ಪ್ರಶಿಕ್ಷಣ ವರ್ಗದಿಂದಲೇ ಬಿಜೆಪಿ ಪಕ್ಷದ ಶಕ್ತಿ ವೃದ್ಧಿಯಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಹೇಳಿದರು.
ನಗರದಲ್ಲಿ ಶನಿವಾರ ನಗರದ ಜಗತ್‍ನಲ್ಲಿನ ಮೈಲಾರಲಿಂಗೇಶ್ವರ್ ದೇವಸ್ಥಾನದಲ್ಲಿ ದಕ್ಷಿಣ ಮಂಡಲ ಬಿಜೆಪಿಯ ಎರಡು ದಿನಗಳ ಪ್ರಶಿಕ್ಷಣ ವರ್ಗದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನೂ ಸಹ ಪ್ರಶಿಕ್ಷಣ ವರ್ಗದ ಮೂಲಕವೇ ಪಕ್ಷದಲ್ಲಿ ಇಲ್ಲಿಯವರೆಗೆ ಬೆಳೆದುಕೊಂಡು ಬಂದಿದ್ದೇನೆ ಎಂದರು.
ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಬೆಳೆದಿದೆ. ಅದಕ್ಕೆ ಪಕ್ಷದ ನಾಯಕರ ಪರಿಶ್ರಮವೇ ಕಾರಣ ಎಂದು ಹೇಳಿದ ಅವರು, ಬಿಜೆಪಿ ಪಕ್ಷದ ಮುಖಂಡರಾದ ಡಿ.ಎ. ಚಿಲ್ಲಾಳ್ ಅವರೂ ಸೇರಿದಂತೆ ನನ್ನ ತಂದೆ ದಿ. ಚಂದ್ರಶೇಖರ್ ಪಾಟೀಲ್ ಅವರು ಪಕ್ಷ ಬೆಳೆಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಎಂದರು.
ಪ್ರಶಿಕ್ಷಣವು ಪಕ್ಷದ ತತ್ವ, ಸಿದ್ಧಾಂತಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಅವರು ಹೇಳಿದರು. ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ದಯಾಘನ್ ಧಾರವಾಡಕರ್ ಅವರು ಮಾತನಾಡಿ, ಪಕ್ಷದ ಬೆಳವಣಿಗೆಯಲ್ಲಿ ಎರಡು ದಿನಗಳ ಪ್ರಶಿಕ್ಷಣ ವರ್ಗವು ಅತ್ಯಂತ ಮಹತ್ವದ್ದಾಗಿದೆ ಎಂದರು.
ವೇದಿಕೆಯ ಮೇಲೆ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ರಾಮಚಂದ್ರ ಗುಮ್ಮಟ್, ವಿಭಾಗೀಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ್ ತೂಗಾಂವ್, ನಗರ ಪ್ರಭಾರಿಗಳಾದ ಅಶೋಕ್ ಅಲ್ಲಾಪೂರ್, ನಗರ ಸಂಚಾಲಕ ಅವಿನಾಶ್ ಕುಲಕರ್ಣಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಅಪ್ಪು ಕಣಕಿ, ದೇವೆಂದ್ರ, ಮಹಾದೇವ್ ಬೆಳಮಗಿ, ಶರಣು ಸಜ್ಜನ್, ವಿದ್ಯಾಸಾಗರ್ ಶಾಬಾದಿ, ವಿಜಯಲಕ್ಷ್ಮೀ ಗೊಬ್ಬೂರಕರ್, ಶೋಭಾ ಬಾಗೇವಾಡಿ, ಸಂಗೀತಾ ಕಟ್ಟಿಮನಿ, ಮಾಯಾ ಕಾಂಬಳೆ, ಮಾಧ್ಯಮ ವಕ್ತಾರ ಅರುಣ್ ಕುಲಕರ್ಣಿ, ನಗರ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.