ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು,ನ.19- ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ನಂಟಿದೆ ಎಂದು ಆರೋಪ ಹೊರಿಸಿದ್ದ
ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ಸಮ್ಮತಿಸಿದೆ.

ತಮ್ಮ ವಿರುದ್ಧ ಆಧಾರ ರಹಿತ, ಇಲ್ಲಸಲ್ಲದ ಹೇಳಿಕೆಗಳನ್ನು ಪ್ರಶಾಂತ್ ಸಂಬರಗಿ ನೀಡುತ್ತಿದ್ದಾರೆಂದು ಶಾಸಕ ಜಮೀನು ಅಹ್ಮದ್ ಖಾನ್ ಸ್ಥಳೀಯ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ, ಮೊಕದ್ದಮೆ ದಾಖಲಿಸಿಲ್ಲ ಎಂದು ಆರೋಪಿಸಿ ನಗರದ 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ ಸೆಕ್ಷನ್ 499 ಹಾಗೂ 500 ರ ಅಡಿ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

ಜತೆಗೆ, ಮುಂದಿನ ವಾರ್ಷಿಕ ಜನವರಿ 21 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಪ್ರಶಾಂತ್ ಸಂಬರಗಿಗೆ ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಇನ್ನೂ, ಶಾಸಕ ಜಮೀರ್ ಪರ ವಕೀಲ ಇಸ್ಮಾಯಿಲ್ ಜಬಿವುಲ್ಲಾ ವಾದ ಮಂಡಿಸಿದರು.