ಪ್ರಶಸ್ತಿ ಪ್ರದಾನ ಸಮಾರಂಭ

ಧಾರವಾಡ,ಏ26: ಡಾ. ಬೆಟಗೇರಿ ಕೃಷ್ಣಶರ್ಮರದು ವಿದ್ವತ್‍ಪೂರ್ಣವಾದ ವ್ಯಕ್ತಿತ್ವ. ಕನ್ನಡ ಹಾಗೂ ಕನ್ನಡತ್ವದ ಜಾಗೃತಿಗಾಗಿ ಸರ್ವಸ್ವವನ್ನು ಧಾರೆ ಎರೆದ ಅವರು ಒಂದು ರೀತಿ ಚಲಿಸುವ ಶಬ್ಧಕೋಶದಂತಿದ್ದರು ಎಂದು ಹಿರಿಯ ಸಾಹಿತಿ ಡಾ.ಬಾಳಣ್ಣಾ ಶೀಗೀಹಳ್ಳಿ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ಬಲಪಡಿಸಲೆಂದು ಡಾ.ಪಂ.ಅವಳೀಕರ ಅವರು ಕೊಡಮಾಡಿದ ದತ್ತಿ ಅಂಗವಾಗಿ ಆಯೋಜಿಸಿದ್ದ ಆನಂದ ಕಂದ-2024' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಡಾ.ಬೆಟಗೇರಿ ಕೃಷ್ಣಶರ್ಮರು ತಮ್ಮ ಬದುಕಿನ ಅನೇಕ ಬಿಕ್ಕಟ್ಟುಗಳನ್ನು ತಮ್ಮ ದಿಟ್ಟತನ ಹಾಗೂ ಸಂಕಲ್ಪ ಶಕ್ತಿಯಿಂದ ನಿವಾರಿಸಿದವರು. ಅವರು ಎಂದಿಗೂ ತಮ್ಮ ಬಡತನದ ವೈಭವವನ್ನು ಉಳಿದವರಂತೆ ದಾಖಲಿಸಲಿಲ್ಲ. ಆನಂದಕಂದರು ಶುದ್ಧಜಾನಪದ ಶೈಲಿಯ ಹಾಡುಗಾರರು. ಜಾನಪದವೇ ಅವರ ಕಾವ್ಯ ಶಕ್ತಿಗೆ ಜೀವಾಳವಾಗಿತ್ತು. ಅವರ ಕೃತಿನಲ್ವಾಡುಗಳು’ ಶುದ್ಧ ಜಾನಪದ ಶೈಲಿಯ ಆಡುನುಡಿಯಾಗಿದ್ದು ಸ್ಥಳೀಯತೆಯನ್ನು ಒಳಗೊಂಡಿದೆ.
ಸಾವಿರ ಹಾಡಿನ ಸರದಾರ ಹುಕ್ಕೇರಿ ಬಾಳಪ್ಪನವರಂತಹ ಶ್ರೇಷ್ಠ ಹಾಡುಗಾರರು ಪ್ರಸಿದ್ಧಿಗೆ ಬಂದಿದ್ದು ಕೃಷ್ಣಶರ್ಮರು ರಚಿಸಿದ ಹಾಡುಗಳಿಂದಲೇ ಈ ಎಲ್ಲಾ ಹಾಡುಗಳು ರಸಪೂರ್ಣವಾಗಿವೆ. ಪತ್ರಕರ್ತರಾದ ಬೆಟಗೇರಿಕೃಷ್ಣಶರ್ಮರುತಮ್ಮಜಯಂತಿ ಪತ್ರಿಕೆಯ ಮೂಲಕ ಲೇಖನಗಳನ್ನು ಬರೆದು ಸುಮಾರು 2 ದಶಕಗಳ ಕಾಲ ಪತ್ರಿಕೆ ಜೀವಂತವಾಗಿಸಿದವರು ಎಂದು ಹೇಳಿದರು.
ಆನಂದಕಂದ-2024 ಪ್ರಶಸ್ತಿ ಪುರಸ್ಕøತ, ಈ ನಾಡಿನ ಹೆಸರಾಂತ ಮೋಡಿ ಲಿಪಿ ತಜ್ಞ ಹಾಗೂ ವಿಶ್ರಾಂತ ಪ್ರಾಧ್ಯಾಪಕಡಾ.ಎಂ.ವೈ.ಸಾವಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಬಲಗೊಳಿಸಲು ಆನಂದಕಂದ ಪ್ರಶಸ್ತಿ ನನಗೆ ಲಭಿಸಿರುವುದು ಅಭಿನಂದನೀಯ.ಮೋಡಿಅದು ಭಾಷೆಯಲ್ಲ. ಅದೊಂದು ಲಪಿ ಮಾತ್ರ.ಮರಾಠಾ ಪೇಶ್ವೆಗಳ ಕಾಲದಲ್ಲಿಅದೊಂದು ವ್ಯವಹಾರಿಕ ಲಿಪಿ ಮಾತ್ರ. ಮೋಡಿ ಲಿಪಿ ಜ್ಞಾನ ನನ್ನೊಬ್ಬನಿಗೆ ಸೀಮಿತ ಆಗಬಾರದೆಂದು ಅದರ ಬಗ್ಗೆ ಅನೇಕ ವಿದ್ಯಾರ್ಥಿಗಳಿಗೆ, ವಕೀಲರಿಗೆ, ಪಿ.ಎಚ್.ಡಿ. ಸಂಶೋಧಕರಿಗೆಅಧ್ಯಯನದ ಬಗ್ಗೆ ತರಬೇತಿ ನೀಡಲಾಗಿದೆ.ಇಂದು ನ್ಯಾಯಾಲಯದಲ್ಲೂ ಅನೇಕ ಪ್ರಕರಣಗಳು ಶೀಘ್ರ ಇತ್ಯರ್ಥಕ್ಕೆ ಮೋಡಿ ಲಿಪಿ ಸರಳೀಕೃತಗೊಳಿಸಿದ್ದೇ ಕಾರಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು.
ಪ್ರಾರಂಭದಲ್ಲಿ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕಟ್ರಸ್ಟ್ ವತಿಯಿಂದ ಆನಂದಕಂದ' ಗೆಳೆಯರ ಬಳಗ, ಧಾರವಾಡಅವರುಆನಂದಕಂದರ’ ಗೀತಗಾಯನ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಅಗಲಿದ ಹಿರಿಯ ನಟ ದ್ವಾರಕೀಶ ಅವರಿಗೆ ಎರಡು ನಿಮಿಷ ಮೌನ ಆಚರಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಂಕರ ಕುಂಬಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಡಾ. ಧನವಂತ ಹಾಜವಗೋಳ ಸನ್ಮಾನ ಪತ್ರಓದಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶ್ರೀನಿವಾಸ ವಾಡಪ್ಪಿ, ಸಿ.ಯು.ಬೆಳ್ಳಕ್ಕಿ, ಎಂ.ಎಂ.ಚಿಕ್ಕಮಠ, ಡಾ.ಅರವಿಂದ ಯಾಳಗಿ, ಶಿವಾನಂದ ಭಾವಿಕಟ್ಟಿ, ಶಶಿಧರ ತೋಡಕರ, ಮನೋಜ ಪಾಟೀಲ, ನಿಂಗಣ್ಣಕುಂಟಿ, ನಾಯ್ಕರಾಣೆ, ಡಾ.ವೈ.ಎಫ್. ಕಲ್ಲನಗೌಡ್ರ.ಡಾ ರಾಜನ್‍ದೇಶಪಾಂಡೆ, ಸುಧೀರಘೋರ್ಪಡೆ, ಎಂ.ಎಸ್. ನರೇಗಲ್, ಶ್ರೀನಾಥ ಬೆಟಗೇರಿ, ಡಾ. ಬಾಳಪ್ಪಾ ಚಿನಗುಡಿ ಸೇರಿದಂತೆ ಅವಳೀಕರ ಕುಟುಂಬಸ್ಥರು ಉಪಸ್ಥಿತರಿದ್ದರು.