ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಳವಾಗಲು ಸಾಧ್ಯ

ಕಲಬುರಗಿ:ಮಾ.2: ಎಲೆ-ಮರೆ ಕಾಯಿಯಂತೆ ಅನೇಕ ಸಾಧಕರು ವಿವಿಧ ಕ್ಷೇತ್ರಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಗುರ್ತಿಸಿ, ಪ್ರಶಸ್ತಿ ನೀಡಿ ಗೌರವಿಸಿದರೆ ಅವರು ಇನ್ನು ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.
ಅಕ್ಷರ ಸಿರಿ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ಕಸ್ತೂರಿ ನಗರದಲ್ಲಿ ಗುರುವಾರ ಸಂಜೆ ಏರ್ಪಡಿಸಲಾಗಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ಸಂಘವು ತಾಲೂಕಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ದಕ್ಷ ಸೇವೆಯನ್ನು ಸೂಕ್ಷ್ಮವಾಗಿ ಗಮನಿಸಿ ಅಕ್ಷರ ಸಿರಿ ಪ್ರಶಸ್ತಿ ನೀಡಿ ಸಂಘಟನೆಯ ಪ್ರಮುಖ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಶಸ್ತಿ ಪುರಸ್ಕøತರು ಎಲ್ಲಾ ಶಿಕ್ಷಕರಿಗೆ ಮಾದರಿಯಾಗುವಂತೆ ಹೆಚ್ಚಿನ ಸೇವೆ ಸಲ್ಲಿಸಬೇಕು. ತಾಲೂಕಿನ ಶಿಕ್ಷಕರ ಸೇವೆಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಇದ್ದರೆ, ಸಂಘ ಅವುಗಳ ಪರಿಹಾರಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಶಿಕ್ಷಕರು ತಾವು ಸಂಪೂರ್ಣವಾಗಿ ಬೋಧನೆಯತ್ತ ಚಿತ್ತ ಹರಿಸಬೇಕು. ಸರ್ಕಾರದ ಸೌಲಭ್ಯಗಳು ತಮಗೆ ದೊರಕಿಸಿಕೊಡಲು ಸಂಘ ಯಾವಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಗುಂಡಪ್ಪ ಜೋಳದ, ಶರಣಪ್ಪ ವಗ್ಗಾಲೆ, ಉಮೇಶ ಮಾಳಾ ಅವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು. ಎಚ್.ಬಿ.ಪಾಟೀಲ, ನೀಲಕಂಠಯ್ಯ ಹಿರೇಮಠ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ವಿಠಲ ಕುಂಬಾರ, ಹೊನ್ನಮ್ಮ ಮಾಳಾ, ಪ್ರಮೋದ ಮಾಳಾ ಸೇರಿದಂತೆ ಮತ್ತಿತರರಿದ್ದರು.