ಪ್ರವೇಶ ಪರೀಕ್ಷೆಗೆ ಹರಿದು ಬಂದ ವಿದ್ಯಾರ್ಥಿ ಸಮೂಹ

ಕಲಬುರಗಿ:ಫೆ.18:ಆಳಂದ ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಪ್ರವೇಶಕ್ಕಾಗಿ ಇಂದು ಜರುಗಿದ ಪ್ರವೇಶ ಪರೀಕ್ಷೆಯಲ್ಲಿ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಹರಿದು ಬಂದಿದ್ದರು.
ಆಳಂದ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಪ್ರವೇಶ ಪರೀಕ್ಷೆಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅತ್ಯಂತ ಹುರುಪಿನಿಂದ ಭಾಗವಹಿಸಿ ಪರೀಕ್ಷೆ ಬರೆದರು. ಪ್ರವೇಶ ಪರೀಕ್ಷೆಯಲ್ಲಿ ಸುಮಾರು 1500 ವಿದ್ಯಾರ್ಥಿಗಳು ನೋಂದಣಿ ಮಾಡಿ ಪರೀಕ್ಷೆ ಬರೆದರು.
ಪ್ರವೇಶ ಪರೀಕ್ಷೆಯಲ್ಲಿ ಮೊದಲ 20 ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾಲೇಜಿನಲ್ಲಿ ಉಚಿತ ಪ್ರವೇಶ, ಮೊದಲ ರ್ಯಾಂಕ್ ಬಂದ ವಿದ್ಯಾರ್ಥಿಗೆ 1 ಟ್ಯಾಬ್, 2ನೇ ರ್ಯಾಂಕ್ ಬಂದವರಿಗೆ ಪಿಯುಸಿ ವಿಜ್ಞಾನ ವಿಭಾಗದ ಸಂಪೂರ್ಣ ಪಠ್ಯಪುಸ್ತಕ, 3ನೇ ರ್ಯಾಂಕ್ ಬಂದವರಿಗೂ ಪಿಯುಸಿ ವಿಜ್ಞಾನ ವಿಭಾಗದ ಸಂಪೂರ್ಣ ಪಠ್ಯಪುಸ್ತಕ ಸಂಸ್ಥೆಯ ವತಿಯಿಂದ ನೀಡಲಾಗುವುದು.
ಕಾಲೇಜಿನಲ್ಲಿ ನೀಟ್, ಸಿಇಟಿ, ಜೆಇಇ ಸೇರಿದಂತೆ ಅನೇಕ ರಾಷ್ಟ್ರ ಮತ್ತು ರಾಜ್ಯಮಟ್ಟದ ಕೋರ್ಸಗಳಿಗೆ ಪಿಯುಸಿ ಪ್ರಥಮ ವರ್ಷದಿಂದಲೇ ತರಬೇತಿ ನೀಡಲಾಗುತ್ತಿದೆ. ಕಳೆದ ಬಾರಿ ಕಾಲೇಜಿಗೆ ಶೇ.100% ರಷ್ಟು ಫಲಿತಾಂಶ ಬಂದಿದೆ. ತಾಲೂಕಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ.
ಕಾಲೇಜಿನಲ್ಲಿ ಸುಜ್ಜಿತ ಲ್ಯಾಬ್‍ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವ ದೊರೆಯುವಂತೆ ಮಾಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಮಯ ಕಾಲೇಜಿನಲ್ಲಿ ಕಳೆಯುವಂತೆ ಮತ್ತು ವಿದ್ಯಾಭ್ಯಾಸದಲ್ಲಿ ನಿರಂತರವಾಗಿ ತೊಡಗುವಂತೆ ಮಾಡಲು ಕಾಲೇಜಿನ ವೇಳೆಯನ್ನು ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಬರೆಯಲು ಅನೂಕೂಲವಾಗುವಂತೆ ಸಂಸ್ಥೆಯಿಂದ ಪಟ್ಟಣದ ಬಸ್ ನಿಲ್ದಾಣ, ರಜ್ವಿ ರಸ್ತೆ, ಶ್ರೀ ರಾಮ ಮಾರುಕಟ್ಟೆ, ಸಿದ್ಧಾರ್ಥ ಚೌಕ್, ಹಳೆಯ ತಹಸೀಲ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಳಂದ ತಾಲೂಕಿನಲ್ಲಿ ಪ್ರಥಮವಾಗಿ ಜರುಗಿದ ಮೇಗಾ ಅರ್ಹತಾ ಪರೀಕ್ಷೆ ಅತ್ಯಂತ ಯಶಸ್ವಿಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ, ಊಟ, ಬಸ್ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.- ಡಾ. ರಾಘವೇಂದ್ರ ಚಿಂಚನಸೂರ, ಆಡಳಿತಾಧಿಕಾರಿ, ಎಸ್ ಆರ್ ಜಿ ಫೌಂಡೇಶನ್, ಆಳಂದ.