ಪ್ರವೃತ್ತಿಗೆ ನಿವೃತ್ತಿ ಇಲ್ಲ:ಡಾ. ಡಿ.ವಿ.ಪರಮಶಿವಮೂರ್ತಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ29: ಸರ್ಕಾರಿ ಸೇವೆಗೆ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆ, ಆದರೆ ನಮ್ಮೊಳಗಿನ ಪ್ರವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಅವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಮಂಜುನಾಥ ಬೇವಿನಕಟ್ಟಿಯವರು ಜನಪದ ತಜ್ಞರು, ವಿದ್ಯಾರ್ಥಿ ಸ್ನೇಹಿ, ನೇರ ನಿಷ್ಠುರವಾದಿ. ಅವರು ವೃತ್ತಿಗೆ ಮಾತ್ರ ನಿವೃತ್ತಿ  ಪಡೆಯುತ್ತಿದ್ದಾರೆ. ಆದರೆ ಪ್ರವೃತ್ತಿಗೆ ನಿವೃತ್ತಿ ಎಂಬುದು ಇಲ್ಲ. ಮುಂದಿನ ದಿನಗಳಲ್ಲಿ ಜನಪದ ಕ್ಷೇತ್ರಕ್ಕೆ ಅವರ ಕೊಡುಗೆ ನೀಡಲಿ. ಅವರಿಗೆ ಸದಾ ವಿಶ್ವವಿದ್ಯಾಲಯದ ಬಾಗಿಲು ತೆರದೆ ಇರುತ್ತದೆ. ಅವರ ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದು ಹಾರೈಸಿದರು.
ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಾರಿಹಳ್ಳಿ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಮಂಜುನಾಥ ಬೇವಿನಕಟ್ಟಿ ಅವರು ನಿಯಮಗಳಿಗೆ ಬದ್ಧವಾಗಿದ್ದವರು ಹಾಗೂ ಶಿಸ್ತುಪಾಲನೆಗೆ ಮೊದಲ ಪ್ರಾಶಸ್ತ್ಯ ನೀಡಿದವರು. ಇವರು ನಮ್ಮ ವಿಶ್ವವಿದ್ಯಾಲಯದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಕುಲಸಚಿವರಾದ ಕಾಲದಲ್ಲಿ ಇವರ ಕಾರ್ಯನಿರ್ವಹಣೆ ನೆನೆಪಿಸುವಂತಹದ್ದು ಎಂದು ತಿಳಿಸಿದರು.
ಸಂಶೋಧನಾ ವಿದ್ಯಾರ್ಥಿ ವಿನಾಯಕ ನಿರೂಪಿಸಿದರು. ಮಾಹಿತಿಕೇಂದ್ರದ ಉಪನಿರ್ದೇಶಕ ಡಾ.ಡಿ.ಮೀನಾಕ್ಷಿ, ವಿದ್ಯಾರ್ಥಿಗಳು ಹಾಜರಿದ್ದರು.

One attachment • Scanned by Gmail