ಪ್ರವೀಣ್ ಹತ್ಯೆ ಹಂತಕರಿಗೆ ಗಲ್ಲು ಶಿಕ್ಷೆಗೆ ಆಗ್ರಹ

ತುಮಕೂರು, ಜು. ೨೮- ಪ್ರವೀಣ್ ನೆಟ್ಟಾರ್ ಹಂತಕರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಾಗೂ ನಿರಂತರವಾಗಿ ನಡೆಯುತ್ತಿರುವ ಹಿಂದೂ ಯುವಕರ ಹತ್ಯೆಗೆ ಕಾರಣವಾದ ಜಿಹಾದಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಉಪವಿಭಾಗಾಧಿಕಾರಿ ಅಜಯ್ ಅವರನ್ನು ಭೇಟಿ ಮಾಡಿದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಮನವಿ ಸಲ್ಲಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆಯೂ ಆಗ್ರಹಿಸಲಾಯಿತು.
ಆರ್‌ಎಸ್‌ಎಸ್ ತುಮಕೂರು ವಿಭಾಗದ ಸಂಚಾಲಕರಾದ ನಾಗೇಂದ್ರ ಮಾತನಾಡಿ, ಕಳೆದ ೩ ವರ್ಷಗಳಿಂದಲೂ ಸಹ ನಿರಂತರವಾಗಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹಲವಾರು ಹಿಂದೂ ಯುವಕರನನ್ನು ಗುರುತಿಸಿ ಹತ್ಯೆ ಮಾಡಲಾಗುತ್ತಿದೆ. ಈ ಎಲ್ಲ ಹೇಡಿ ಕೃತ್ಯಗಳಿಗೆ ಜಿಹಾದಿ, ಭಯೋತ್ಪಾದಕವೇ ನೇರ ಕಾರಣ ಎಂದು ದೂರಿದರು.
ಇಂತಹ ಜಿಹಾದಿಗಳಿಗೆ ಕೆಲ ಮುಸಲ್ಮಾನರು ಬೆಂಬಲ ನೀಡುತ್ತಿದ್ದಾರೆ. ಇಂತಹ ಕೃತ್ಯಗಳು ನಡೆದಾಗ ಈ ಸಮುದಾಯ ಬಾಯಿ ಮುಚ್ಚುಗೊಂಡು ಮೌನವಾಗಿರುತ್ತದೆ. ಹೀಗಾದರೆ ಹೇಗೆ ಇಂತಹ ಕೃತ್ಯಗಳ ವಿರುದ್ಧ ಧ್ವನಿ ಎತ್ತಬೇಕು. ಇಂತಹ ಜಿಹಾದಿಗಳನ್ನು ಕಿತ್ತೆಸೆಯದಿದ್ದರೆ ಮಾನವ ಕುಲಕ್ಕೆ ಕಂಟಕರಾಗಲಿದ್ದಾರೆ ಎಂದು ಕಿಡಿಕಾರಿದರು.
ಎಸ್‌ಡಿಪಿಐ ಮತ್ತು ಪಿಎಫ್‌ಐ ನಂತಹ ಸಂಘಟನೆಗಳುಜಿಹಾದಿ ಕೃತ್ಯಕ್ಕೆ ಪ್ರೇರಣೆ ನೀಡುತ್ತಾ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿರುವೆ. ಇಂತಹ ಕೊಲೆಗಡುಕರನ್ನು ಹಿಡಿಯುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್‌ನ ಮಂಜು ಭಾರ್ಗವ್ ಮಾತನಾಡಿ, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬಂದು ಅಮಾಯಕರನ್ನು ಹತ್ಯೆ ಮಾಡುತ್ತಿರುವವರನ್ನು ಎಡೆಮುರಿ ಕಟ್ಟಬೇಕು. ಈ ಬಗ್ಗೆ ಹಲವು ಬಾರಿ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವುದಾಗಿ ಹೇಳಿದರು.
ಪ್ರವೀಣ್ ನೆಟ್ಟಾರ್ ಮೇಲೆ ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇವರೊಬ್ಬ ಅಮಾಯಕ. ಇವರು ಅಂಗಡಿ ಬಾಗಿಲು ಹಾಕಬೇಕಾದರೆ ಹಿಂದಿನಿಂದ ತಲವಾರ್‌ನಲ್ಲಿ ಬೀಸಿ ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹತ್ಯೆ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಇಂತಹ ಅಮಾಯಕರನ್ನು ಬಲಿ ತೆಗೆದುಕೊಳ್ಳುವಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಬಿ.ನಂದೀಶ್, ಕೆ.ಪಿ. ಮಹೇಶ್, ನರಸಂಹಮೂರ್ತಿ, ಚಂದನ್, ಪ್ರೇಮ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.