ಪ್ರವೀಣ್ ಹತ್ಯೆ ಶೀಘ್ರ ಕೊಲೆಗಡುಕರ ಬಂಧನ: ಸಿಎಂ

ಬೆಂಗಳೂರು,ಜು.೨೭-ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಭೀಕರ ಕೊಲೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊಲೆಗಡುಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಒಬ್ಬ ಅಮಾಯಕನ ಕೊಲೆಯಾದಾಗ ಆಕ್ರೋಶ ಇರಲಿದೆ. ಕೇರಳ ಗಡಿ ದಾಟಿ ಕೊಲೆಗಾರರ ಹಿಡಿಯಲು ಗೃಹಸಚಿವರು, ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅಂಗಡಿ ಬಾಗಿಲು ಮುಚ್ಚುವ ವೇಳೆ ಯಾರೂ ಇಲ್ಲದಿರುವಾಗ ಕೊಲೆ ನಡೆದಿದೆ. ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಒಂದು ವ್ಯವಸ್ಥಿತ ಸಂಚು. ಕ್ಷೋಬೆ ಉಂಟು ಮಾಡುವ ವರ್ಗದಿಂದ ಕೊಲೆ ಮಾಡಲಾಗಿದೆ. ಆ ವರ್ಗವನ್ನು ಸದೆ ಬಡಿಯುವ ಕೆಲಸ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ಅಲ್ಲಿನ ಜನರಲ್ಲಿ ಆಕ್ರೋಶ ಇದೆ. ಶಾಂತಿ ಕಾಪಾಡಲು ಮನವಿ ಮಾಡಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕಾರುತ್ತಿಲ್ಲ. ಆ ಘಟನೆ ನಡೆಯಬಾರದಿತ್ತು ಎನ್ನುವ ಆಕ್ರೋಶ ಅವರದ್ದು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಿರುವ ಆಕ್ರೋಶಕ್ಕೆ ಅವರು ಸ್ಪಷ್ಟನೆ ನೀಡಿದರು.
ದುರದೃಷ್ಟಕರ ಘಟನೆ: ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ದುರದೃಷ್ಟಕರ ಸಂಗತಿ. ಒಬ್ಬ ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಕೊಲೆಯಾಗಿದ್ದಾನೆ.
ಬೈಕ್‌ನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರವೀಣ್ ಕೇರಳದ ಗಡಿಯಲ್ಲಿದ್ದರು. ಹೀಗಾಗಿ ಕೇರಳ ಸರ್ಕಾರದ ಜೊತೆಗೂ ನಮ್ಮ ಪೊಲೀಸರು ಮಾತನಾಡಿದ್ದಾರೆ.ಅಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ಒಬ್ಬ ಯುವಕನ ಕೊಲೆಯಾಗಿರುವುದರಿಂದ ಆ ಭಾಗದ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ. ನಾನು, ಮುಖ್ಯಮಂತ್ರಿಗಳು ರಾತ್ರಿಯೇ ಪೊಲೀಸರ ಜೊತೆ ಮಾತಾಡಿದ್ದೇವೆ. ಅಗತ್ಯ ಸೂಚನೆ ನೀಡಿದ್ದೇವೆ. ಇದೀಗ ಪೊಲೀಸರು ಕೊಲೆಗಡುಕರ ಬೆನ್ನಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಎಡಿಜಿಪಿ ಭೇಟಿ: ನಮ್ಮ ಎಡಿಜಿಪಿ ಮಂಗಳೂರಿಗೆ ಹೋಗಿದ್ದಾರೆ. ಇಂಥ ಘಟನೆಗಳು ಮರುಕಳಿಸುತ್ತಿವೆ. ಹಿಜಬ್ ಹಿಂದಿನ ಶಕ್ತಿಗಳೇ ಇದರ ಹಿಂದೆಯೂ ಇದೆ. ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ಅನೇಕ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿದ್ದಾರೆ. (ಎರಡನೇ ಪುಟ ನೋಡಿ)