ಪ್ರವೀಣ್ ಹತ್ಯೆ : ಬಿಜೆಪಿ ಕಾರ್ಯಕರ್ತರಿಗೆ ಬೊಮ್ಮಾಯಿ ಸಾಂತ್ವಾನ


ಬೆಂಗಳೂರು, ಜು. ೨೮- ಮಂಗಳೂರಿನಲ್ಲಿ ನಿನ್ನೆ ಹತ್ಯೆಗೀಡಾದ ಪ್ರವೀಣ್ ನೆಟ್ಟ್ಯಾರೆ ಕುಟುಂಬದವರನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಇಂದು ಮಂಗಳೂರಿಗೆ ತೆರಳುವ ಸಾಧ್ಯತೆಗಳಿವೆ.
ಇಂದು ಬೆಳಿಗ್ಗೆ ಆರ್.ಟಿ. ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಗಳೂರಿಗೆ ಹೋಗುವ ತೀರ್ಮಾನ ಮಾಡುತ್ತೇನೆ ಎಂದರು.
ಪ್ರವೀಣ್ ಹತ್ಯೆಯಿಂದ ಆಕ್ರೋಶಗೊಂಡು ರಾಜೀನಾಮೆ ನೀಡುತ್ತಿರುವ ಎಲ್ಲ ಕಾರ್ಯಕರ್ತರನ್ನು ಸಮಾಧಾನ ಮಾಡುವುದಾಗಿಯೂ ಅವರು ಹೇಳಿದರು.
ಇದು ಬಹಳ ಸೂಕ್ಷ್ಮ ಸಂದರ್ಭ. ಅವರೆಲ್ಲ ನಮ್ಮ ಕಾರ್ಯಕರ್ತರು, ಅವರ ಜತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಘಟನೆಯ ಎಲ್ಲ ಮಾಹಿತಿಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದೇನೆ. ನಿನ್ನೆಯೇ ಹೈಕಮಾಂಡ್ ಜತೆ ಮಾತನಾಡಿದ್ದೇನೆ. ಇಂದು ಸುದ್ದಿಗೋಷ್ಠಿಯ ಬಳಿಕ ಮಂಗಳೂರಿಗೆ ಹೋಗುವ ತೀರ್ಮಾನ ಮಾಡುತ್ತೇನೆ ಎಂದು ಅವರು ತಿಳಿಸಿದರು.