ಪ್ರವೀಣ್ ಹತ್ಯೆ ಪ್ರಕರಣ : ಜಿಲ್ಲೆಯಲ್ಲೂ ರಾಜೀನಾಮೆ ಬಿಸಿ, ಮೂಲ ಬಿಜೆಪಿಗರ ನಿರ್ಲಕ್ಷ್ಯ – ಅಸಮಾಧಾನ ವೇದಿಕೆ

ನಾಮಕರಣ, ರಾಜಕೀಯ ಪ್ರಾತಿನಿಧ್ಯ ಕಡಗಣನೆ : ಹೈಕಮಾಂಡ್ ಗಮನ ಸೆಳೆಯಲು ಎರಡು ಸಮಾನ ಮನಸ್ಕರ ಸಭೆ – ಲಿಂಗಸೂಗೂರಿನಲ್ಲಿ ರಾಜೀನಾಮೆ
ರಾಯಚೂರು.ಜು.೨೯- ಬೆಳ್ಳಾರೆ ಪ್ರವೀಣ್ ಕೊಲೆಯ ಪ್ರಕರಣದಿಂದ ರಾಜ್ಯದಲ್ಲಿ ಉಂಟಾದ ರಾಜೀನಾಮೆ ಪರ್ವ ಜಿಲ್ಲೆಯಲ್ಲೂ ಮೂಲ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರು ಎರಡು ಪ್ರತ್ಯೇಕ ಸಭೆಗಳನ್ನು ನಿರ್ವಹಿಸಿದ ಅಂಶ ಬೆಳಕಿಗೆ ಬಂದಿದೆ.
ಪ್ರವೀಣ್ ಹತ್ಯೆಯ ನಂತರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವ ಪ್ರಕ್ರಿಯೆ ರಾಜ್ಯದಲ್ಲಿ ತೀವ್ರತೆ ಪಡೆದಿದೆ. ಲಿಂಗಸೂಗೂರು ತಾಲೂಕಿನಲ್ಲೂ ರಾಜೀನಾಮೆ ನೀಡಿದ ಪ್ರಕರಣಗಳಿವೆ. ಆದರೆ, ಈ ಪ್ರಕರಣವನ್ನೇ ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಮೂಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ನಿರ್ಲಕ್ಷ್ಯೆ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಸರಿ ಸುಮಾರು ಎರಡು ವರ್ಷ ಕಳೆದರೂ, ನಾಮಕರಣ ಮತ್ತು ಇನ್ನಿತರ ರಾಜಕೀಯ ಚಟುವಟಿಕೆಗಳಲ್ಲಿ ಮೂಲ ಬಿಜೆಪಿಗರನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎನ್ನುವ ಅಸಮಾಧಾನಕ್ಕೆ ಪ್ರವೀಣ್ ಕೊಲೆ ಪ್ರಕರಣದ ರಾಜೀನಾಮೆ ಪರ್ವ ವೇದಿಕೆಯಾಗಿ ಮಾರ್ಪಟ್ಟಿದೆ.
ಜಿಲ್ಲೆಯಲ್ಲೂ ಸಂಘ ಪರಿವಾರದ ಮೂಲ ಬಿಜೆಪಿಗರ ನಿರ್ಲಕ್ಷ್ಯೆಯ ಬಗ್ಗೆ ತೀವ್ರ ಅಸಮಾಧಾನಗಳಿವೆ. ವಿಶೇಷವಾಗಿ ಸಂಸದರು ಮತ್ತು ಶಾಸಕರ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ, ಕೇವಲ ಸಂಸದರ, ಶಾಸಕರ ಆಪ್ತರು ಹಾಗೂ ಇವರಿಗೆ ಆರ್ಥಿಕವಾಗಿ ಅನುಕೂಲ ಮಾಡುವ ವ್ಯಕ್ತಿಗಳಿಗೆ ಆದ್ಯತೆ ನೀಡುತ್ತಿರುವ ಬಗ್ಗೆ ಅಸಮಾಧಾನ ತೀವ್ರವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರ ನಾಮ ನಿರ್ದೇಶನ ಹಾಗೂ ಇನ್ನಿತರ ಕಾಮಗಾರಿ ಹಂಚಿಕೆಯಲ್ಲಿ ಸ್ಥಳೀಯ ಶಾಸಕರು ಮತ್ತು ಪ್ರಭಾವಿ ನಾಯಕರು ಪಕ್ಷದ ಮೂಲ ಬಿಜೆಪಿಗರನ್ನು ದೂರ ಉಳಿಸುತ್ತಿರುವ ಬಗ್ಗೆ ಅನೇಕ ದೂರುಗಳು ನೀಡಿದ್ದರೂ, ರಾಜ್ಯದ ಮುಖಂಡರು ಯಾವುದೇ ಗಮನ ಹರಿಸಲಿಲ್ಲ.
ಆದರೆ, ಪ್ರವೀಣ್ ಪ್ರಕರಣದ ನಂತರ ಪಕ್ಷಕ್ಕೆ ರಾಜೀನಾಮೆ ನೀಡುವ ಪ್ರಕ್ರಿಯೆ ಈಗ ಮೂಲ ಬಿಜೆಪಿ ಮತ್ತು ಕಾರ್ಯಕರ್ತರ ಬಗ್ಗೆ ಹೈಕಮಾಂಡ್ ಹೆಚ್ಚಿನ ಗಮನ ಹರಿಸುವಂತಹ ಪರಿಸ್ಥಿತಿಗೆ ದಾರಿ ಮಾಡುವುದರಿಂದ ಜಿಲ್ಲೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷ್ಯಿಸುವ ಹೈಕಮಾಂಡ್‌ಗೆ ದೂರು ನೀಡುವ ಬಗ್ಗೆ ಎರಡು ಸಭೆಗಳಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ಲಿಂಗಸೂಗೂರು ಹೊರತು ಪಡಿಸಿ, ಜಿಲ್ಲೆಯಲ್ಲಿ ಯಾವುದೆ ಮುಖಂಡರು ಮತ್ತು ಕಾರ್ಯಕರ್ತರು ರಾಜೀನಾಮೆ ನೀಡಿಲ್ಲವಾದರೂ, ಈ ಸಂದರ್ಭವನ್ನು ಜಿಲ್ಲೆಯಲ್ಲಿ ತಮ್ಮನ್ನು ನಿರ್ಲಕ್ಷ್ಯಿಸುತ್ತಿರುವ ಜನಪ್ರತಿನಿಧಿಗಳು ಮತ್ತು ಮುಖಂಡರ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಗಂಭೀರ ಪ್ರಯತ್ನಗಳು ನಡೆದಿವೆ.
ಇತ್ತೀಚಿಗೆ ನಡೆದ ನಾಮಕರದಲ್ಲಿ ಇತರೆ ಪಕ್ಷದವರಿಗೆ ಆದ್ಯತೆ ನೀಡುತ್ತಿರುವ ಬಗ್ಗೆಯೂ ನಿನ್ನೆ ಪಕ್ಷದ ಹೈಕಮಾಂಡ್ ಗಮನ ಸೆಳೆಯಲಾಗಿತ್ತು. ಆದರೆ, ಈ ಬಗ್ಗೆ ಪಕ್ಷದ ಮುಖಂಡರು ಯಾವುದೆ ಗಂಭೀರತೆ ವಹಿಸಿರಲಿಲ್ಲ. ಆದರೆ, ಪ್ರವೀಣ ಹತ್ಯೆಯ ನಂತರ ರಾಜ್ಯದಲ್ಲಿ ಬಿಜೆಪಿ ಪಕ್ಷ ಮುಜುಗರ ಆಗುವ ರೀತಿಯಲ್ಲಿ ರಾಜಕೀಯ ಬೆಳವಣಿಗೆಗಳು ತಲೆಯೆತ್ತಿದ್ದರಿಂದ ಮುಖಂಡರು ಮತ್ತು ಕಾರ್ಯಕರ್ತರ ಬಗ್ಗೆ ಹೈಕಮಾಂಡ್ ಗಮನ ಹರಿಸುವ ಆಶಾಭಾವನೆ ಮೂಲ ಬಿಜೆಪಿಗರದ್ದಾಗಿದೆ.
ಬೆಂಗಳೂರಿಗೆ ನಿಯೋಗ ತೆರಳಿ, ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಬಿಜೆಪಿ ಶಾಸಕರು ಹಾಗೂ ಮಾಜಿ ಶಾಸಕರು ಇರುವ ಕ್ಷೇತ್ರಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಖಂಡರ ಗಮನ ಸೆಳೆಯಲು ತೀರ್ಮಾನಿಸಲಾಗಿದೆ.
ಸ್ಥಳೀಯ ಪಕ್ಷದ ನಾಯಕರು ಮೂಲ ಬಿಜೆಪಿಗರಿಗೆ ರಾಜಕೀಯ ಆದತ್ಯೆ ದೊರೆಯುವಂತೆ ಮಾಡುವಲ್ಲಿ ನಿರ್ಲಕ್ಷ್ಯಿಸುತ್ತಿರುವ ಬಗ್ಗೆಯೂ ಹೈಕಮಾಂಡ್ ಗಮನ ಸೆಳೆಯಲು ಉದ್ದೇಶಿಸಲಾಗಿದೆ. ಒಟ್ಟಾರೆಯಾಗಿ ಪ್ರವೀಣ್ ಪ್ರಕರಣ ಜಿಲ್ಲೆಯ ಮೇಲೆ ಯಾವುದೇ ಗಂಭೀರ ಪರಿಣಾಮಕ್ಕೆ ಕಾರಣವಾಗದಿದ್ದರೂ, ರಾಜಕೀಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿ ಸಂಘ ಪರಿವಾರ ಮತ್ತು ಮೂಲ ಬಿಜೆಪಿಗರಲ್ಲಿ ಅಸಮಾಧಾನ ತೋಡಿಕೊಳ್ಳುವ ವೇದಿಕೆಯಾಗಿ ಮಾರ್ಪಟ್ಟಿರುವುದು ಮುಂಬರುವ ದಿನಗಳಲ್ಲಿ ಆಡಳಿತರೂಢ ಬಿಜೆಪಿ ಪಕ್ಷ ಹೊಸ ಸವಾಲ್‌ಗಳನ್ನು ಎದುರಿಸುವಂತೆ ಮಾಡಿದೆ.