ಪ್ರವೀಣ್ ಹತ್ಯೆ ಖಂಡಿಸಿ ತಿಪಟೂರು ಬಂದ್ ಯಶಸ್ವಿ

ತಿಪಟೂರು, ಜು. ೨೯- ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರೆ ಹತ್ಯೆ ಖಂಡಿಸಿ ಹಿಂತೂ ಹಿತರಕ್ಷಣಾ ಸಮಿತಿ ಹಾಗೂ ಬಜರಂಗದಳ ಇಂದು ಕರೆ ನೀಡಿದ್ದ ತಿಪಟೂರು ಬಂದ್ ಯಶಸ್ವಿಯಾಗಿದೆ.
ರಾಜ್ಯದಲ್ಲಿ ನಿರಂತರವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ, ಹತ್ಯೆಯಂತಹ ಪ್ರಕರಣಗಳು ನಡೆಯುತ್ತಿರುವುದನ್ನು ಖಂಡಿಸಿ ಹಾಗೂ ಕೂಡಲೇ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ಕರೆ ನೀಡಿದ್ದ ಬಂದ್‌ಗೆ ವರ್ತಕರುಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ಮುಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಹಿಂದೂಪರ ಸಂಘಟನೆಗಳು ತಿಪಟೂರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಮನೆಗಳತ್ತೆ ಹೆಜ್ಜೆ ಹಾಕಿದರು.
ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದರು.
ಬಂದ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದಲ್ಲಿ ಕೆಲವು ಗಂಟೆಗಳ ಕಾಲ ವ್ಯತ್ಯಯ ಉಂಟಾಗಿತ್ತು. ಮಧ್ಯಾಹ್ನದ ನಂತರ ನಿಧಾನಗತಿಯಲ್ಲಿ ವಾಹನಗಳ ಸಂಚಾರ ಆರಂಭವಾಯಿತು.
ನಗರದ ಕೆಂಪಮ್ಮದೇವಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.