ಪ್ರವೀಣ್ ಹತ್ಯೆ ಖಂಡಿಸಿ ಈಡಿಗ ಸಮಾಜದಿಂದ ಪ್ರತಿಭಟನೆ

ಚಿತ್ತಾಪುರ:ಜು.29: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯೆ ತಾಲೂಕಿನ ಬೆಳ್ಳಾರೆಯಲ್ಲಿ ಹಿಂದು ಕಾರ್ಯಕರ್ತ ಹಾಗೂ ಈಡಿಗ ಬಿಲ್ಲವ ಸಮಾಜದ ಯುವ ಮುಖಂಡರೂ ಆದ ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಖಂಡಿಸಿ ಹಾಗೂ ಮೃತ ಕುಟುಂಬಕ್ಕೆ 1ಕೋಟಿ ಪರಿಹಾರ ಮತ್ತು ಪತ್ನಿಗೆ ಸರಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಆರ್ಯ ಈಡಿಗ ಸಮಾಜದ ಮುಖಂಡರು ಗುರುವಾರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ದಿಂದ ತಹಸೀಲ್ ಕಚೇರಿ ವರೆಗೆ ಶಾಂತಿಯುತ ಪ್ರತಿಭಟನೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಮಾತನಾಡಿ, ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರು ಬಡ ಮಧ್ಯಮ ವರ್ಗದ ಕುಟುಂಬದ ಯುವಕನಾಗಿದ್ದು ಶೇಖರ ಪೂಜಾರಿ, ರತ್ನಾವತಿ ದಂಪತಿಯ ಏಕೈಕ ಪುತ್ರ. ಶೇಂದಿ ಮೂರ್ತೆಗಾರಿಕೆ ಕುಟುಂಬದ ಬೆಳಕಾಗಿದ್ದ.ದುಡಿಮೆ ಸಂಪಾದನೆಗಿಂತ ಹೆಚ್ಚಿನ ಸಮಯ ಸಮಾಜಕ್ಕೆ ನೀಡುತ್ತಿದ್ದ ಸಂಸಾರದ ಆಧಾರ ಸ್ತಂಭವೇ ಆಗಿದ್ದ ಪ್ರವೀಣ್‍ನ ಕಣ್ಮರೆ ಆ ಇಡೀ ಮನೆಯನ್ನೇ ಕತ್ತಲಿಗೆ ತಳ್ಳಿದಂತಾಗಿದೆ.ಈ ಹತ್ಯೆಯನ್ನು ಚಿತ್ತಾಪುರ ತಾಲೂಕು ಆರ್ಯ ಈಡಿಗ ಸಮಾಜ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ ಮಾತನಾಡಿ, ಪ್ರವೀಣ್ ಹತ್ಯೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಪ್ರವೀಣ್ ಕುಟುಂಬಕ್ಕೆ ಸರಕಾರ 1 ಕೋಟಿ ಪರಿಹಾರ ನೀಡಬೇಕು ಮತ್ತು ಪ್ರವೀಣ್ ಪತ್ನಿಗೆ ಸರಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

ಗೌರವ ಸಲಹೆಗಾರ ಶ್ರೀಮಂತ ಗುತ್ತೇದಾರ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ ಹಿಂದು ಯುವ ಕಾರ್ಯಕರ್ತರ ಹತ್ಯೆಯಾಗುತ್ತಿರುವುದು ನೋವಿನ ಸಂಗತಿ.ರಾಜ್ಯ ಸರಕಾರ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು. ಸರಕಾರ ಕೂಡಲೇ ಪ್ರವೀಣ್ ಹತ್ಯೆಯ ತನಿಖೆಯನ್ನು ಮಾಡುವ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಹಚ್ಚಿನ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಈ ತನಿಖೆ ಕಾರ್ಯ ಎನ್‍ಐಎ (ನ್ಯಾಷನಲ್ ಇನ್ವೇಸ್ಟಿಗೇಷನ್ ಏಜೆನ್ಸಿ)ಗೆ ಒಪ್ಪಿಸಬೇಕು ಇಲ್ಲದಿದ್ದರೆ ಆರ್ಯ ಈಡಿಗ ಸಮಾಜದ ವತಿಯಿಂದ ರಾಜ್ಯಾದ್ಯಂತ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಸುನೀಲ ಗುತ್ತೇದಾರ ವಾಡಿ, ಸೂರ್ಯಕಾಂತ ಕಟ್ಟಿಮನಿ ಮಾತನಾಡಿದರು. ಸಂಗಯ್ಯ ಗುತ್ತೇದಾರ, ಹುಸನಯ್ಯ ಗುತ್ತೇದಾರ, ರವಿ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ಸ್ವಸ್ತಿಕ್ ಭಂಡಾರಿ, ಸಂತೋಷ ಸಂಕ್ಲಾಪೂರ, ನರಸಯ್ಯ ಗುತ್ತೇದಾರ, ಅಶೋಕ ಗುತ್ತೇದಾರ ಹೊಸ್ಸುರ್, ದೀಪಕ್ ಗುತ್ತೇದಾರ, ಹುಸನಯ್ಯ ಗುತ್ತೇದಾರ ವಾಡಿ, ಭೀಮಯ್ಯ ಗುತ್ತೇದಾರ, ಸಾಯಿ ಗುತ್ತೇದಾರ, ಅಂಬರೀಶ ಗುತ್ತೇದಾರ, ಆನಂದ ಗುತ್ತೇದಾರ, ಮೇಘರಾಜ ಗುತ್ತೇದಾರ, ಕಾಶಿರಾಯ ಕಲಾಲ್, ಉಮೇಶ ಕಕ್ಕುಂದಿ, ನಾರಾಯಣ ಗುತ್ತೇದಾರ, ಜಗು ಮರಗೋಳ, ಅಂತಯ್ಯ ಮುಕ್ತೇದಾರ, ಭಾಗ್ಯನಾಥ ಗುತ್ತೇದಾರ, ರವಿಕಿರಣ ಗುತ್ತೇದಾರ, ಹಣಮಯ್ಯ ಲಾಡ್ಲಾಪೂರ, ಬಸಂತ ಕದ್ದರಗಿ ಇತರರು ಇದ್ದರು.