ಪ್ರವೀಣ್ ಹತ್ಯೆ ಎನ್‌ಐಎ ತನಿಖೆಗೆ ಶೋಭಾ ಒತ್ತಾಯ

ಬೆಂಗಳೂರು,ಜು.೨೭- ಮಂಗಳೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಕೇಂದ್ರದ ಕೃಷಿ ರಾಜ್ಯಸಚಿವೆ ಶೋಭಾಕರಂದ್ಲಾಜೆ ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರವರನ್ನು ಭೇಟಿ ಮಾಡಿ ಎನ್‌ಐಎ ತನಿಖೆಗೆ ವಹಿಸುವಂತೆ ಮನವಿ ಮಾಡುವುದಾಗಿಯೂ ಅವರು ಹೇಳಿ, ರಾಷ್ಟ್ರೀಯ ಭದ್ರತೆಗೆ ಸವಾಲಾಗಿರುವವರನ್ನು ಪತ್ತೆ ಹಚ್ಚಬೇಕಾಗಿದೆ ಎಂದರು.
ಪ್ರವೀಣ್ ತುಂಬ ಸಜ್ಜನ, ಪಕ್ಷ ಸಂಘ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ಈತನ ಕೊಲೆಯ ಹಿಂದೆ ಒಂದು ದೊಡ್ಡ ಷಡ್ಯಂತ್ರವಿದೆ. ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಉದ್ದೇಶವಿದೆ ಎಂದರು.
ಈ ಪ್ರಕರಣದ ಬಗ್ಗೆ ಎನ್‌ಐಎ ತನಿಖೆಯಾಗಬೇಕು. ಈ ಹತ್ಯೆಯ ಹಿಂದೆ ಯಾವ ಸಂಘಟನೆ ಇದೆ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಸ್ಥಳೀಯರು ಈ ಹತ್ಯೆಗೆ ಕುಮ್ಮಕ್ಕು ನೀಡಿರುವ ಸಾಧ್ಯತೆಗಳಿವೆ ಎಂದರು.
ಈ ಹಿಂದೆ ಹತ್ಯೆಯಾದ ಮಸೂದ್‌ಗೂ, ಪ್ರವೀಣ್‌ಗೂ ಸಂಬಂಧವಿಲ್ಲ. ಮಸೂದ್‌ನ ಕೊಲೆ ವೈಯಕ್ತಿಕ ಜಗಳಕ್ಕೆ ಆಗಿತ್ತು. ಪ್ರವೀಣ್ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದರು.