ಪ್ರವೀಣ್ ಹತ್ಯೆ ಎನ್‌ಐಎ ತನಿಖೆ ಡಬಲ್ ಇಂಜಿನ್ ಸರ್ಕಾರದ ಡಬಲ್ ಗೇಮ್

ಬೆಂಗಳೂರು,ಜು.೩೦- ಬೆಳ್ಳಾರೆಯ ಪ್ರವೀಣ್‌ನೆಟ್ಟಾರು ಕೊಲೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿರುವ ರಾಜ್ಯಸರ್ಕಾರ, ಕರಾವಳಿಯಲ್ಲಿ ನಡೆದ ಹತ್ಯೆಗಳನ್ನೆಲ್ಲಾ ಎನ್‌ಐಎ ತನಿಖೆಗೆ ಒಪ್ಪಿಸಲು ಹಿಂಜರಿಯುತ್ತಿರುವುದು ಏಕೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕರಾವಳಿಯಲ್ಲಿ ಕಳೆದ ೧೦ ದಿನಗಳಲ್ಲಿ ನಡೆದ ಮೂರು ಕೊಲೆ ಪ್ರಕರಣಗಳನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ನೆತ್ತರದಾರೆ ಹರಿದಷ್ಟು ಭರ್ಜರಿ ಮತದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ, ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಲಿಲ್ಲ. ಚುನಾವಣೆ ವರ್ಷವಲ್ಲವೇ? ಕೊಲೆಗಳು ಹೆಚ್ಚೆಚ್ಚು ಆಗಬೇಕು. ಅವರ ಮತ ಪೆಟ್ಟಿಗೆ ತುಂಬಬೇಕು, ನೆತ್ತರಧಾರೆ ಹರಿದಷ್ಟು ಭರ್ಜರಿ ಮತಧಾರೆ ಎಂದು ಟೀಕಿಸಿದ್ದಾರೆ.
ಕರಾವಳಿ ಭಾಗದಲ್ಲಿ ಪ್ರತಿ ಕೊಲೆಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನವುದೂ ಗೊತ್ತಿದೆ. ಆದರೆ, ಡಬಲ್ ಇಂಜಿನ್ ಸರ್ಕಾರ ಡಬಲ್ ಗೇಮ್ ಆಡುತ್ತಿದೆ. ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೆ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣವನ್ನು ಸರ್ಕಾರ ಎನ್‌ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ಸಮಾಧಿ ಕಟ್ಟಲು ಹೊರಟಿದೆ. ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೇ? ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮುಲೋತ್ಥಾಟನೆ ಮಾಡಬಲ್ಲರು. ಆದರೆ ಸರ್ಕಾರಕ್ಕೆ ಅದು ಬೇಕಿಲ್ಲ ಎಂದು ಟೀಕಿಸಿದ್ದಾರೆ.
ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಿ ವೀರಾವೇಷ ಹೊಂದಿರುವ ಮುಖ್ಯಮಂತ್ರಿಗಳು, ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ ಶಾಂತಿ ಕಾಪಾಡಿ ಎಂಬ ಮಾತು ಬಂತಾ? ಬರಲಿಲ್ಲ. ನೆಮ್ಮದಿಗಾಗಿ ಕಿಂಚಿತ್ತೂ ಕ್ರಮ ವಹಿಸಿಲ್ಲ, ಹಿಂಸೆಗೆ ಇನ್ನಷ್ಟು ತುಪ್ಪ ಸುರಿದು ಬಂದಿದ್ದಾರೆ ಎಂದು ಟ್ವಿಟರ್‌ನಲ್ಲಿ ದೂರಿದ್ದಾರೆ.
ಕರ್ನಾಟಕ ಸರ್ವಜನರ ಶಾಂತಿಯ ತೋಟ, ಇದನ್ನು ಸರ್ವನಾಶ ಮಾಡಿದ್ದೀರಿ, ಹಿಂಸೆಯ ವಿಷ ಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೆ ಬಲಿಯಾಗುವುದು ಖಚಿತ.
ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕತರ ಆಕ್ರೋಶವೇ ಚರಮ ಗೀತೆ ಬರೆಯಲಿದೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.