ಪ್ರವೀಣ್ ಹತ್ಯೆಗೆ ಸೊಗಡು ಖಂಡನೆ

ತುಮಕೂರು, ಜು. ೨೯- ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡನೀಯ ಎಂದಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ರಾಜ್ಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ನಿಗಾ ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಹತ್ಯೆಯಿಂದ ಆಕ್ರೋಶಗೊಂಡಿರುವ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ರಾಜೀನಾಮೆ ಕೊಡುತ್ತಿರುವುದು ವಿಚಾರ ಬೆಳಕಿಗೆ ಬಂದಿದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರು ರಾಜೀನಾಮೆ ಕೊಡಬೇಕಿಲ್ಲ. ಬದಲಾಗಿ ಬೀದಿಗಿಳಿದು ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸೋಣ ಎಂದರು.
ಸ್ವಾರ್ಥಕ್ಕಾಗಿ ದೇಶ ಏಕೆ ಒಡೆಯುತ್ತಿದ್ದೀರಾ? ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿ ದೇಶ ರಕ್ಷಣೆಗೆ ಪಣ ತೊಡಬೇಕು ಎಂದರು.
ಎಸ್‌ಡಿಪಿಐ, ಮುಸ್ಲಿಂ ಸಂಘಟನೆಗಳು ಅಗೋಚರ ಯುದ್ಧ ಸಾರಿವೆ. ೪೦-೫೦ ಜನರನ್ನು ಕತ್ತರಿಸಿ ಹಾಕಲಾಗಿದೆ. ನಾವೇನಾದರೂ ಕಾನೂನು ಕೈಗೆ ತೆಗೆದುಕೊಂಡರೆ ಅದಕ್ಕೆ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು.
ಪ್ರವೀಣ್ ಹತ್ಯೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಈವರೆಗೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಈ ಹಿಂದೆ ಅಧಿಕಾರ ಮಾಡಿದವರು ಸರ್ಕಾರವನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ಸರ್ಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ನಮ್ಮವರ ರಕ್ಷಣೆಗೆ ನಾವು ಚಳವಳಿ ರೂಪಿಸಲಿದ್ದೇವೆ ಎಂದು ಅವರು ಹೇಳಿದರು.
ದೇಶದ್ರೋಹಿಗಳನ್ನು ಜನರಿಗೆ ಗೊತ್ತಾಗುವಂತೆ ಪ್ರಮುಖ ವೃತ್ತಗಳಲ್ಲಿ ನೇತು ಹಾಕಬೇಕು. ನಾನು ತಪ್ಪು ಮಾಡಿದರೆ ನೇತು ಹಾಕಲಿ ಎಂದು ಅವರು ಗುಡುಗಿದರು.
ರಾಜ್ಯ ಮತ್ತು ದೇಶದಲ್ಲಿರುವ ಕೆಲ ಸಂಶಯಾಸ್ಪದ ವಿದೇಶಗರ ವೀಸಾ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.