ಪ್ರವೀಣ್ ಹಂತಕರ ಸುಳಿವು ನೀಡಿದ ಜ್ಞಾನೇಂದ್ರ

ಬೆಂಗಳೂರು,ಆ. ೨- ಬಿಜೆಪಿ ಕಾರ್ಯಕರ್ತ ಪ್ರವೀಣ್‌ಬೆಳ್ಳಾರೆ ಹತ್ಯೆಯನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗಿದೆ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ, ತನಿಖೆ ನಡೆದಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿರುವ ಗೃಹ ಸಚಿವ ಅರಗಜ್ಞಾನೇಂದ್ರ ಅವರು ಈ ಹತ್ಯೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹತ್ಯೆಯಲ್ಲಿ ಯಾರಿದ್ದಾರೆ ಎಂಬ ಬಗ್ಗೆ ಈಗಲೇ ನಾನು ಏನು ಹೇಳಲ್ಲ. ತನಿಖೆ ನಂತರ ಎಲ್ಲವೂ ಬಯಲಾಗಲಿದೆ ಎಂದರು.
ಸುರತ್ಕಲ್‌ನ ಫಾಜಿಲ್ ಹತ್ಯೆ ಪ್ರಕರಣದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಬೆಳ್ಳಾರೆಯ ಮಸೂದ್ ಕೊಲೆ ಪ್ರಕರಣದಲ್ಲೂ ಆರೋಪಿಗಳ ಬಂಧನವಾಗಿದೆ. ಎಲ್ಲ ಪ್ರಕರಣದಲ್ಲೂ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿದೆ ಎಂದರು.
ಸಿದ್ದು ಪೋಸ್
ನಾಳಿನ ಸಿದ್ದರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರವರಿಗೆ ಒಳ್ಳೆಯದಾಗಲಿ, ಅವರು ಅಧಿಕಾರದಲ್ಲಿದ್ದಾಗ ಮಾಡಬಾರದನ್ನೆಲ್ಲ ಮಾಡಿ ಈಗ ಫೋಸ್ ಕೊಡೋಕೆ ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಮತಾಂಧ ಶಕ್ತಿಗಳ ಮೇಲೆ ಇದ್ದ ಪ್ರಕರಣವನ್ನು ಹಿಂಪಡೆದು ಮತಾಂಧ ಶಕ್ತಿಗಳನ್ನು ಬೆಳೆಸಿದರು. ಇದರಿಂದ ಇಂದು ನಾವು ಅನುಭವಿಸುವಂತಾಗಿದೆ.ಕಾನೂನು ಸುವ್ಯವಸ್ಥೆಗೆ ಇವರೆಲ್ಲ ಧಕ್ಕೆ ತರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಈ ದಿನ ಈ ಎಲ್ಲ ಘಟನೆಗಳಿಗೆ ಸಿದ್ದರಾಮಯ್ಯರವರೇ ನೇರ ಕಾರಣ. ಜನ ಇದನ್ನು ಮರೆಯಲ್ಲ ಎಂದು ಸಚಿವ ಅರಗ ಜ್ಞಾನೇಂದ್ರ ಸಿದ್ದರಾಮಯ್ಯರವರನ್ನು ಗುರಿಯಾಗಿಸಿ ಟೀಕಿಸಿದರು.