ಪ್ರವೀಣ್ ನೆಟ್ಟಾರು ಹತ್ಯೆ:ಎನ್ ಐಎ ತನಿಖೆಗೆ ಕೇಂದ್ರದ ಆದೇಶ

ಮಂಗಳೂರು, ಆ.5- ರಾಜ್ಯಾದ್ಯಂತ ಕೋಲಾಹಲ ಸೃಷ್ಟಿಸಿರುವ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಲಿಸಿದೆ.ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಗೃಹ ಸಚಿವಾಲಯವ ಇಂದು ಈ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ವಿಪುಲ್ ಅಲೋಕ್ ಆಗಸ್ಟ್‌ 3 ರಂದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಿಗೆ ಪತ್ರ ಬರೆದು ಆದೇಶಿಸಿದ್ದಾರೆ. ಆದೇಶದ ಪ್ರತಿಯನ್ನು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಡಿಜಿಪಿ ಅವರಿಗೆ ಕಳುಹಿಸಿಕೊಡಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ- 2008 ರ ಅಡಿಯಲ್ಲಿ ಬರುವ ಅಪರಾಧ ಎಂಬ ಅಭಿಪ್ರಾಯಕ್ಕೆ ಕೇಂದ್ರ ಸರ್ಕಾರ ಬಂದಿದೆ. ಅಪರಾಧದ ಗಂಭೀರತೆ ಮತ್ತು ಅದರ ಅಂತಾರಾಜ್ಯ ಪರಿಣಾಮಗಳನ್ನು ಪರಿಗಣಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ, 2008 ರ ಪ್ರಕಾರ ತನಿಖೆಗೆ ಒಳಪಡಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಪ್ರವೀಣ್ ನೆಟ್ಟಾರು ಬೆಳ್ಳಾರೆಯ ಮಾಸ್ತಿಕಟ್ಟೆ ಎಂಬಲ್ಲಿ ಅಕ್ಷಯ ಪ್ರೆಶ್ ಚಿಕನ್ ಫಾರ್ಮ್ ಕೋಳಿ ಅಂಗಡಿ ನಡೆಸುತ್ತಿದ್ದರು. ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್‌ನಲ್ಲಿ​ ಆಗಮಿಸಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿದ್ದರು.‌ಈ ಘಟನೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.